
ಸುವರ್ಣ ಆರೋಗ್ಯಸೌಧ (ಬೆಳಗಾವಿ): ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿ ವಿವಿಧ ಚಿಕಿತ್ಸೆಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ (ಸಿಜಿಎಚ್‌ಎಸ್) ಪರಿಷ್ಕೃತ ದರಗಳನ್ನು ಅನ್ವಯಿಸುವ ಪ್ರಸ್ತಾವವು ಪರಿಶೀಲನೆಯಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಗೃಹ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕೇಂದ್ರ ನಿಗದಿ ಮಾಡಿದ ದರವನ್ನು ಅಳವಡಿಸಿಕೊಳ್ಳಲಾಗಿದೆ. ಯಶಸ್ವಿನಿ ಯೋಜನೆಗೆ ಸಹಕಾರ ಇಲಾಖೆ ಅನುಮೋದನೆ ಬೇಕಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಕೇಂದ್ರ ನಿಗದಿ ಮಾಡಿದ ದರದ ಬದಲು ಪ್ರಸ್ತುತ 2014ರ ಆರೋಗ್ಯ ಪ್ರಯೋಜನೆಗಳ ಪ್ಯಾಕೇಜ್ (ಎಚ್‌ಬಿಪಿ) ದರದ ಪ್ರಕಾರ ವೆಚ್ಚ ನೀಡಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ ವಿವಿಧ ಆರೋಗ್ಯ ಯೋಜನೆಗಳ ಅಡಿ ಪಡೆಯುವ ಚಿಕಿತ್ಸೆಗಳಿಗೆ ಸಿಜಿಎಚ್‌ಎಸ್ ದರಗಳನ್ನು ನೀಡದ ಕಾರಣ ಹಲವು ಆಸ್ಪತ್ರೆಗಳಲ್ಲಿ ಸೇವೆ ಪಡೆಯಲು ಕಷ್ಟವಾಗುತ್ತಿದೆ. ಸಿಜಿಎಚ್‌ಎಸ್ ಅಡಿ ಸಿಸೇರಿಯನ್ ಹೆರಿಗೆಗೆ ₹38,040, ಸಾಮಾನ್ಯ ಹೆರಿಗೆಗೆ ₹26,775 ನಿಗದಿಯಾಗಿದೆ. ಆದರೆ, ರಾಜ್ಯದ ಯಶಸ್ವಿನಿ ಯೋಜನೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಕೇವಲ ₹14,000, ಆಂಜಿಯೋಪ್ಲಾಸ್ಟ್‌ಗೆ ಪರಿಷ್ಕೃತ ಸ್ಟೆಂಟ್ ದರವೂ ಸೇರಿ ₹1 ಲಕ್ಷ ಆಗುತ್ತದೆ. ಬೇರೆ ಯೋಜನೆಯಡಿ ₹60,000 ಇದೆ. ಹೀಗೆ ಪ್ರತಿ ಕಾಯಿಲೆಯ ಚಿಕಿತ್ಸೆಗೆ ಇರುವ ದರದಲ್ಲಿ ಭಾರಿ ವ್ಯತ್ಯಾಸವಿದೆ. ಇದರಿಂದ ಯಶಸ್ವಿನಿ ಯೋಜನೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ನೀಡಲು ಆಸ್ಪತ್ರೆಗಳಿಗೆ ಕಷ್ಟವಾಗಿದೆ. ದರ ಪರಿಷ್ಕರಣೆಗೆ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಧನಂಜಯ ಸರ್ಜಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.