ADVERTISEMENT

ಆರೋಗ್ಯ ಇಲಾಖೆ ನೌಕರರಿಂದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 16:26 IST
Last Updated 5 ಫೆಬ್ರುವರಿ 2023, 16:26 IST

ಬೆಂಗಳೂರು: ಸಮಾನ ವೇತನ, ಸೇವಾ ಭದ್ರತೆ ಸೇರಿ‌ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಸೋಮವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಇಲಾಖೆಗಳಡಿ 30 ಸಾವಿರಕ್ಕೂ ಅಧಿಕ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ. ಬೇಡಿಕೆಗಳು ಈಡೇರುವವರೆಗೂ ಸ್ವಾತಂತ್ಯ ಉದ್ಯಾನದಲ್ಲಿ ಮುಷ್ಕರ ಕೈಗೊಳ್ಳುವುದಾಗಿ ನೌಕರರು ಘೋಷಿಸಿದ್ದಾರೆ.

ನೌಕರರ ಸೇವೆ ಕಾಯಂಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ನೇರ ಪಾವತಿ, ಸಾಮಾಜಿಕ ಭದ್ರತೆ ಯೋಜನೆಗಳ ಜಾರಿ, ಕೃಪಾಂಕ ಶೇ 30ಕ್ಕೆ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರು ಆಗ್ರಹಿಸಿದ್ದಾರೆ.

ADVERTISEMENT

‘ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರ ಮನೆಗೆ ಮುತ್ತಿಗೆ ಹಾಕಿ, ಹೋರಾಟವನ್ನು ತೀವ್ರಗೊಳಿಸುತ್ತೇವೆ. ಈ ಅವಧಿಯಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ನೇರ ಹೊಣೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ವೈ. ವಿಶ್ವಾರಾಧ್ಯ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.