ADVERTISEMENT

ಉತ್ತರ ಕನ್ನಡ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಕ್ರಮ –ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 19:30 IST
Last Updated 22 ಸೆಪ್ಟೆಂಬರ್ 2022, 19:30 IST
ಡಾ.ಕೆ. ಸುಧಾಕರ್‌
ಡಾ.ಕೆ. ಸುಧಾಕರ್‌   

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕವಾದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲೇ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕೆಂಬ ಬೇಡಿಕೆ ಜೋರಾಗಿ ಸದ್ದು ಮಾಡಿತು. ಬಿಜೆಪಿ ಸದಸ್ಯರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ ಮತ್ತು ದಿನಕರ ಶೆಟ್ಟಿ ಸಭಾಧ್ಯಕ್ಷರ ಪೀಠದ ಎದುರು ಧರಣಿಗೂ ಮುಂದಾದರು. ರೂಪಾಲಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಆಸ್ಪತ್ರೆ ಆರಂಭಿಸುವ ಭರವಸೆ ನೀಡಿದರು.

ಕಳೆದ ವಾರ ತಡೆ ಹಿಡಿದಿದ್ದ ಪ್ರಶ್ನೆಗೆ ಸಚಿವರು ಗುರುವಾರ ಉತ್ತರ ನೀಡಿದರು. ‘ಆರ್ಥಿಕ ಇಲಾಖೆಯು ಆಸ್ಪತ್ರೆ ಆರಂಭಿಸುವ ಪ್ರಸ್ತಾವವನ್ನು ತಿರಸ್ಕರಿಸಿದೆ’ ಎಂದು ಹಿಂದೆ ನೀಡಿದ್ದ ಉತ್ತರವನ್ನೇ ಪ್ರಸ್ತಾಪಿಸಿದ ಉತ್ತರ ಕನ್ನಡ ಜಿಲ್ಲೆಯ ಶಾಸಕರು, ‘ತಕ್ಷಣದಲ್ಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಮ್ಮ ಜಿಲ್ಲೆಯ ಜನರಿಗೆ ಉತ್ತಮವಾದ ಆಸ್ಪತ್ರೆಗಳೇ ಇಲ್ಲ. ಚಿಕಿತ್ಸೆಗಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವಂತೆ ಶಾಸಕಿಯಾದ ಬಳಿಕ 33 ಪತ್ರಗಳನ್ನು ಬರೆದಿದ್ದೇನೆ. ಯಾವ ಪ್ರಯೋಜನವೂ ಆಗಿಲ್ಲ. ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೂ ತಜ್ಞ ವೈದ್ಯರು ಮತ್ತು ಯಂತ್ರೋಪಕರಣಗಳ ಕೊರತೆ ಇದೆ’ ಎಂದು ರೂಪಾಲಿ ಹೇಳಿದರು.

‘ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ₹ 300 ಕೋಟಿ ಅನುದಾನ ಒದಗಿಸಿ’ ಎಂದು ದಿನಕರ ಶೆಟ್ಟಿ ಆಗ್ರಹಿಸಿದರು. ‘ಆಸ್ಪತ್ರೆಗಳೆಲ್ಲವೂ ಬೆಂಗಳೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಇರಬೇಕಾ’ ಎಂದು ಸುನೀಲ್‌ ನಾಯ್ಕ ಪ್ರಶ್ನಿಸಿದರು.

‘ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು. ಎಲ್ಲಿ ಜಮೀನಿನ ಲಭ್ಯತೆ ಎಲ್ಲಿದೆ ಎಂಬುದನ್ನು ಗುರುತಿಸಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಜಿಲ್ಲೆಯಲ್ಲಿ 100 ವೈದ್ಯರ ಕೊರತೆ ಇದೆ’ ಎಂದರು.

ಉತ್ತರ ನೀಡಿದ ಸುಧಾಕರ್‌, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಕುರಿತು ಜಿಲ್ಲೆ ಶಾಸಕರು, ಸಚಿವರ ಜತೆ ಈಗಾಗಲೇ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿಯವರೂ ಈ ಪ್ರಸ್ತಾವಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಆದಷ್ಟು ಬೇಗನೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಇಎಸ್‌ಐ ಆಸ್ಪತ್ರೆ ಸಾಧ್ಯವಿಲ್ಲ’
‘ಜಿಲ್ಲೆಯವರೇ ಆದ ಶಿವರಾಂ ಹೆಬ್ಬಾರ್‌ ಕಾರ್ಮಿಕ ಸಚಿವರಾಗಿದ್ದಾರೆ. ಅವರ ಇಲಾಖೆಯಲ್ಲಿ ಸಾಕಷ್ಟು ಹಣವಿದೆ. ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ (ಇಎಸ್‌ಐ) ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು’ ಎಂದು ಆರ್‌.ವಿ. ದೇಶಪಾಂಡೆ ಸಲಹೆ ನೀಡಿದರು.

‘ಕನಿಷ್ಠ 50,000 ಇಎಸ್‌ಐ ವಿಮೆ ಹೊಂದಿದವರಿದ್ದರೆ ಮಾತ್ರ ಅಂತಹ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ 39,000 ಕಾರ್ಮಿಕರು ಮಾತ್ರ ಇಎಸ್‌ಐ ವ್ಯಾಪ್ತಿಯಲ್ಲಿದ್ದಾರೆ. ಆದ್ದರಿಂದ ಆಸ್ಪತ್ರೆ ಆರಂಭಿಸುವುದು ಸಾಧ್ಯವಿಲ್ಲ’ ಎಂದು ಸಚಿವ ಹೆಬ್ಬಾರ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.