ADVERTISEMENT

ಮಲೆನಾಡಿನಲ್ಲಿ ರಭಸದ ಮಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 18:33 IST
Last Updated 20 ಜುಲೈ 2020, 18:33 IST
ಶಿವಮೊಗ್ಗದ ಗೋಪಾಳ ಬಡಾವಣೆಯ ಕೃಷ್ಣ ಮಠ ರಸ್ತೆಯ ’ಎ‘ ಬ್ಲಾಕ್‌ನಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿರುವುದು
ಶಿವಮೊಗ್ಗದ ಗೋಪಾಳ ಬಡಾವಣೆಯ ಕೃಷ್ಣ ಮಠ ರಸ್ತೆಯ ’ಎ‘ ಬ್ಲಾಕ್‌ನಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿರುವುದು   
""

ಬೆಂಗಳೂರು: ಕರಾವಳಿಯಲ್ಲಿ ತಗ್ಗಿರುವ ಮಳೆ, ಮಲೆನಾಡಿನಲ್ಲಿ ಗುಡುಗು ಸಹಿತ ರಭಸವಾಗಿ ಸುರಿದಿದೆ. ನದಿಗಳ ಹರಿವಿನ ಪ್ರಮಾಣ ಏರಿಕೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಕೆಲವೆಡೆ ಬಿರುಸಾಗಿ ಸುರಿದಿದೆ. ತುಂಗಾ, ಭದ್ರಾ ನದಿಗಳ ಹರಿವಿನ ಪ್ರಮಾಣ ತುಸು ಏರಿಕೆಯಾಗಿದೆ.ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ಸೋಮವಾರ ಕೆಲವೆಡೆ ಜೋರು ಮಳೆಯಾಗಿದೆ. ಕೆಲ ಬಡಾವಣೆಗಳ ಚರಂಡಿಗಳಲ್ಲಿ ತುಂಬಿ ಹರಿದು ನೀರು ಮನೆಗಳಿಗೆ ನುಗ್ಗಿದೆ. ಹೊಸನಗರ, ಭದ್ರಾವತಿಯಲ್ಲಿ ಜೋರು ಮಳೆಯಾಗಿದೆ. ತೀರ್ಥಹಳ್ಳಿ, ಶಿಕಾರಿಪುರ, ಸಾಗರದಲ್ಲಿ ಸಾಧಾರಣ ಮಳೆಯಾಗಿದೆ.

ದಾವಣಗೆರೆ,ಚಿತ್ರದುರ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಿದೆ.ಚಳ್ಳಕೆರೆಯಲ್ಲಿ ಭಾನುವಾರ ತಡರಾತ್ರಿ ಸುರಿದ ಬಿರುಸು ಮಳೆಗೆ ಇಲ್ಲಿನ ಬಳ್ಳಾರಿ ರಸ್ತೆಯ ಅಭಿಷೇಕ್‍ ನಗರ ಮತ್ತು ಅಜ್ಜನಗುಡಿ ರಸ್ತೆಯ ರಹೀಂ ನಗರದ ಕೆಲ ಮನೆಗೆ ಮಳೆ ನೀರು ನುಗ್ಗಿತ್ತು.

ADVERTISEMENT

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಬಿಸಿಲಿನಿಂದ ಕೂಡಿದ್ದ ವಾತಾವರಣ ಕಂಡು ಬಂತು.ಬೆಳ್ತಂಗಡಿ ತಾಲ್ಲೂಕಿನಲ್ಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡುಪಿ ಹೆಬ್ಬಾರ್ತಿಲ್ ಗುಡ್ಡದಲ್ಲಿ ಭಾರಿ ಬಂಡೆಯೊಂದು ಉರುಳಿ ಬಿದ್ದಿದೆ. ಬಂಡೆ ಕುಸಿತದ ಸಂದರ್ಭ ಭಾರಿ ದೂಳು ಎದ್ದಿತ್ತು. ಆದರೆ, ಯಾರಿಗೂ ಹಾನಿಯಾಗಿಲ್ಲ.

ತುಮಕೂರು ನಗರ ಸೇರಿದಂತೆ ಜಿಲ್ಲೆಯ ಮಧುಗಿರಿ, ಶಿರಾ, ಕೊರಟಗೆರೆ ಭಾಗದಲ್ಲಿ ಭಾನುವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದೆ. ನಡುರಾತ್ರಿ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ಬೋರ್ಗರೆಯಿತು.ಕೊರಟಗೆರೆ ತಾಲ್ಲೂಕು ತೋವಿನಕೆರೆ ಮಳೆ ಮಾಪನ ಕೇಂದ್ರದಲ್ಲಿ 116.4 ಮಿ.ಮೀ ಮಳೆ ದಾಖಲಾಗಿದೆ. ಸಣ್ಣ ಕೆರೆ, ಕಟ್ಟೆಗಳು, ಕೃಷಿ ಹೊಂಡಗಳು ತುಂಬಿವೆ.ಗೌರಿಬಿದನೂರು ತಾಲ್ಲೂಕಿನಲ್ಲಿ ಸುರಿದ ಮಳೆಗೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ಶ್ರಾವಂಡನಹಳ್ಳಿ ಗ್ರಾಮದ ಬಳಿ ಕುಮದ್ವತಿ ನದಿ ತುಂಬಿ ಹರಿಯುತ್ತಿದೆ.

ಬೆಳಗಾವಿ, ವಿಜಯಪುರ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಸುರಿದ ನಿರಂತರ ಮಳೆಯಿಂದ ಹಳ್ಳಗಳು ತುಂಬಿ ಹರಿದು, ಭತ್ತದ ಸಸಿ ಮಡಿಗಳು ಜಲಾವೃತಗೊಂಡಿವೆ. ಹಗರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.ತುಂಗಭದ್ರಾ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ. ಕಲಬುರ್ಗಿ, ಬೀದರ್‌, ಕೊಪ್ಪಳ ಜಿಲ್ಲೆಗಳ ಕೆಲವೆಡೆ ಬಿರುಸಿನ ಮಳೆಯಾಗಿದೆ.

ಸಿಡಿಲು ಬಡಿದು ಸಾವು

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ಕೃಷ್ಣಪ್ಪ ಬಜೆಮ್ಮಣ್ಣವರ(35) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದೆ.

ಬಾಲಕ, ವೃದ್ಧೆ ಸಾವು:ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರದಲ್ಲಿ ಮಳೆಯಿಂದ ಮನೆ ಚಾವಣಿ ಕುಸಿದು ಉಮರ್ ಫಾರುಕ್ (10) ಮತ್ತು ಬಸವನಬಾಗೇವಾಡಿ ತಾಲ್ಲೂಕಿನಹೂವಿನಹಿಪ್ಪರಗಿ ಗ್ರಾಮದಲ್ಲಿ ಮಣ್ಣಿನ ಮನೆಯ ಚಾವಣಿ ಕುಸಿದುಲಾಲಬೀ ನಬೀಸಾಬ್ ಶಾಬಾದಿ(75) ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.