ADVERTISEMENT

ಧಾರಾಕಾರ ಮಳೆ: ಭತ್ತದ ಬೆಳೆಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:13 IST
Last Updated 23 ಏಪ್ರಿಲ್ 2021, 20:13 IST
ರಾಯಚೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ
ರಾಯಚೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ   

ಬೆಂಗಳೂರು: ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗರಿ, ಕರಾವಳಿಯ ಸುಬ್ರಹ್ಮಣ್ಯ ಸೇರಿ ರಾಜ್ಯದ ಅಲ್ಲಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಧಾರಾಕಾರ ಮಳೆಗೆ ಭತ್ತದ ಬೆಳೆ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ, ಸಿಡಿಲಿಗೆ ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನಲ್ಲಿ ಹಸು, ಕರು ಮತ್ತು ಕುಷ್ಟಗಿ ತಾಲ್ಲೂಕಿನಲ್ಲಿ ಒಂದು ಎತ್ತು ಮೃತಪಟ್ಟಿವೆ.

ಬೆಳಗಾವಿ ಹೊರವಲಯದ ಕಣಬರ್ಗಿ ರಸ್ತೆಯ ಬಳಿ ಶುಕ್ರವಾರ ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ ಇಬ್ಬರು ಕೂಲಿಕಾರ್ಮಿಕರಾದ ಕರೆಪ್ಪ ವ್ಯಾಪಾರಗಿ (44) ಮತ್ತು ಭರಮಪ್ಪ ಭೀಮಪ್ಪ ಬಾದರವಾಡಿ (39) ಅವರು ಸಿಡಿಲು ಬಡಿದು ಮೃತಪಟ್ಟರು.

ರಾಯಚೂರು ಜಿಲ್ಲೆಯ ದೇವದುರ್ಗ, ಕವಿತಾಳ, ದೇವಸುಗೂರು ಹಾಗೂ ಮಸ್ಕಿ ಸುತ್ತಮುತ್ತ ಗುರುವಾರ ತಡ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆಹಾನಿಯಾಗಿದೆ. ಎಂ.ರಾಮಲದಿನ್ನಿಯಲ್ಲಿ ಕರಿಯಪ್ಪ ನಾಯಕ ಅವರಿಗೆ ಸೇರಿದ ಹಸು ಮತ್ತು ಕರು ಸಿಡಿಲಿಗೆ ಬಲಿಯಾಗಿವೆ. ಮಸ್ಕಿ ಸಮೀಪದ ಬಳಗಾನೂರು, ಉದ್ಬಾಳ, ಹುಲ್ಲೂರಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ಎಕರೆ ಹಾಗೂ ದೇವದುರ್ಗ ತಾಲ್ಲೂಕಿನ ಇಂಗಳದಾಳ, ಖಾನಾಪುರ, ಹದ್ದಿನಾಳ ಹಾಗೂ ರಾಯಚೂರು ತಾಲ್ಲೂಕಿನ ವಿವಿಧೆಡೆ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ.

ADVERTISEMENT

‘ಸರ್ಕಾರಕೂಡಲೇ ರೈತರ ನೆರವಿಗೆ ಬರಬೇಕು. ಸೂಕ್ತ ಪರಿಹಾರ ನೀಡಬೇಕು’ ಎಂದು ಗಂಜಳ್ಳಿಯ ರೈತ ತಿಮ್ಮಪ್ಪ ಕೋರಿ
ದ್ದಾರೆ. ಕುಷ್ಟಗಿ ತಾಲ್ಲೂಕಿನ ವಣಗೇರಿಯಲ್ಲಿ ಎತ್ತು ಮೃತಪಟ್ಟಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವಿವಿಧೆಡೆ ಭತ್ತದ ರಾಶಿ ಹಾಳಾಗಿದೆ. ವಿವಿಧ ಗ್ರಾಮಗಳಲ್ಲಿ ಸಾವಿರಾರು ಚೀಲ ಭತ್ತ ಮಳೆ ನೀರಿಗೆ ತೊಯ್ದಿದೆ.

ಕರಾವಳಿಯ ಕಡಬ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ನಸುಕಿನ ಜಾವ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಭಾರಿ ಮಳೆಗೆರೆಂಜಿಲಾಡಿಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹುಬ್ಬಳ್ಳಿ, ವಿಜಯಪುರ ಜಿಲ್ಲೆಯ ಸಿಂದಗಿ, ಬಸವನಬಾಗೇವಾಡಿ, ಹೊಸಪೇಟೆ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮತ್ತು ಬೆಳಗಾವಿಯಲ್ಲಿ ತುಂತುರು ಮಳೆಯಾಗಿದೆ. ಗದಗ–ಬೆಟಗೇರಿ ಅವಳಿ ನಗರದಲ್ಲಿ ಗುಡುಗು, ಮಿಂಚಿನಆರ್ಭಟ ಹೆಚ್ಚಿತ್ತು. ಉತ್ತರ ಕನ್ನಡದ ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಮಲೆನಾಡಿನ ಭಾಗಗಳಾದ ಶಿರಸಿ, ಸಿದ್ದಾಪುರ ಯಲ್ಲಾಪುರಗಳಲ್ಲಿ ಗುರುವಾರ ತಡರಾತ್ರಿ ಮಳೆಯಾಗಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಹುಚ್ಚವ್ವನಹಳ್ಳಿ, ತಾಯಿಟೊಣೆ, ಚಿಕ್ಕಮಲ್ಲನ
ಹೊಳೆ, ಹಿರೆಮಲ್ಲನಹೊಳೆ ಸೇರಿ ತೊರೆಸಾಲು ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ತಾಯಿಟೊಣೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮನೆ ಶೀಟ್‌ಗಳು ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಉರುಳಿದ್ದು, 6 ಕುರಿಗಳು ಮೃತಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.