ADVERTISEMENT

23 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ: ಏಳು ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 17:45 IST
Last Updated 18 ಜುಲೈ 2021, 17:45 IST
   

ಬೆಂಗಳೂರು:‘ಮುಂಗಾರು ಚುರುಕಾಗಿರುವುದು ಹಾಗೂ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ‌ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜುಲೈ 19 ರಿಂದ ಮತ್ತು 22ರ ವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

‘ಕರಾವಳಿ ಜಿಲ್ಲೆಗಳಲ್ಲಿ ಐದು ದಿನಗಳಿಂದ ವ್ಯಾಪಕ ಮಳೆಯಾಗಿದೆ. ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿಜು. 19 ಮತ್ತು 20ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. 3.7 ಮೀಟರ್‌ಗಳಷ್ಟು ಎತ್ತರದ ಅಲೆಗಳೂ ಏಳುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು’ ಎಂದು ಅವರು ಎಚ್ಚರಿಸಿದರು.

ADVERTISEMENT

‘ದಾವಣಗೆರೆ, ಹಾವೇರಿ, ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲೂ ಹೆಚ್ಚು ಮಳೆಯಾಗುವ ಸೂಚನೆ ಇರುವುದರಿಂದ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ. ಬೀದರ್, ಕಲಬುರ್ಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಮೈಸೂರು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ’ ಎಂದು ಹೇಳಿದರು.

ಮಳೆ–ಎಲ್ಲಿ, ಎಷ್ಟು?:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭಾನುವಾರ 21 ಸೆಂ.ಮೀ ಗರಿಷ್ಠ ಮಳೆಯಾಗಿದೆ.

ದಾವಣಗೆರೆಯ ಜಿಲ್ಲೆಯ ಉಚ್ಚಂಗಿದುರ್ಗ 20, ಆಗುಂಬೆ 18, ಕುಂದಾಪುರ, ತೊಂಡೇಬಾವಿ 16, ದಾವಣಗೆರೆ 15, ಸುಬ್ರಹ್ಮಣ್ಯ 13, ಪಣಂಬೂರು 12, ಮಂಗಳೂರು, ಉಡುಪಿ 11, ಕಾರ್ಕಳ, ಮೂಡುಬಿದರೆ 10, ಪುತ್ತೂರು 9, ಬೆಳ್ತಂಗಡಿ, ಬಂಗಾರಪೇಟೆ, ಚಿಕ್ಕಬಳ್ಳಾಪುರ 8, ಸುಳ್ಯ 7, ದೊಡ್ಡಬಳ್ಳಾಪುರ, ಗುಬ್ಬಿ 6, ಚಿತ್ರದುರ್ಗ, ದೇವನಹಳ್ಳಿ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಮಡಿಕೇರಿ 5, ಕಾರವಾರ, ಬೀದರ್, ಹೊಸಕೋಟೆ, ಮಳವಳ್ಳಿ, ಕೊಪ್ಪ, ಹೊಸದುರ್ಗ, ಕೊಳ್ಳೇಗಾಲ, ಚಿಕ್ಕಮಗಳೂರು, ಶ್ರೀನಿವಾಸಪುರ, ತುಮಕೂರು, ಸಕಲೇಶಪುರ 4, ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ, ಬೇಲೂರು, ಮಾಲೂರು 3, ಬಾಗಲಕೋಟೆ, ವಿಜಯಪುರ, ಪಾಂಡವಪುರ, ಹಾಸನ, ನೆಲಮಂಗಲ, ಅರಕಲಗೂಡು, ಚಳ್ಳಕೆರೆ, ತಿಪಟೂರು, ಬೆಂಗಳೂರು 2, ಶಿರಸಿ, ಕಡೂರು, ಮಂಡ್ಯ, ಕುಣಿಗಲ್, ಸೊರಬ, ಹುಣಸೂರು, ಬಾಗೇಪಲ್ಲಿ ಹಾಗೂ ಗುಡಿಬಂಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.