ADVERTISEMENT

ಭಾರಿ ಮಳೆಗೆ ರಾಜ್ಯದಲ್ಲಿ ನಾಲ್ಕು ಮಂದಿ ಸಾವು

ಸಿಡಿಲಿಗೆ 15 ಜಾನುವಾರು ಮೃತ: ಹಲವೆಡೆ ರಸ್ತೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 4:25 IST
Last Updated 8 ಏಪ್ರಿಲ್ 2023, 4:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರವೂ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಮಳೆ ಸಂಬಂಧಿತ ಅವಘಡಗಳಿಂದ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹದಿಮೂರು ಜಾನುವಾರುಗಳು ಸಾವನ್ನಪ್ಪಿವೆ.

ಕುರಿ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಗದಗ ತಾಲ್ಲೂಕಿನ ಲಿಂಗದಾಳ ಗ್ರಾಮದ ಶರಣಪ್ಪ ಪುರದ (19) ಹಾಗೂ ದೇವರಾಜ ಹನುಮಂತಪ್ಪ (19) ಮೃತಪಟ್ಟಿದ್ದಾರೆ. ಮತ್ತೊಬ್ಬ ಕುರಿಗಾಹಿ ಸುನೀಲ್‌ ಎಂಬಾತ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜಾಲಿಹಾಳ‌ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಮಳೆಯಿಂದ ಮನೆ ಚಾವಣಿ ಕುಸಿದು ಯಂಕುಬಾಯಿ ಕುಲಕರ್ಣಿ (79), ಶಾರವ್ವ ಪತ್ತಾರ (58) ಮೃತಪಟ್ಟಿದ್ದಾರೆ.

ADVERTISEMENT

ಸಿಡಿಲು ಬಡಿದು ಕೊಪ್ಪಳದಲ್ಲಿ ಎರಡು ಜಾನುವಾರುಗಳು, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ 5 ಜಾನುವಾರುಗಳು ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ 6 ಜಾನುವಾರುಗಳು, ಅಫಜಲಪುರ ತಾಲ್ಲೂಕಿನ ತೆಲ್ಲೋಣಗಿ ಗ್ರಾಮದಲ್ಲಿ ಬಸವರಾಜ ಮಾಗಣಗೇರಿ ಅವರಿಗೆ ಸೇರಿರುವ ಎರಡು ಎತ್ತುಗಳು ಸಾವನ್ನಪ್ಪಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ. ಉಜಿರೆ, ಧರ್ಮಸ್ಥಳ, ಮುಂಡಾಜೆ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು, ನಾರಾವಿ, ವೇಣೂರು, ಅಳದಂಗಡಿ ಭಾಗದಲ್ಲೂ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.