ADVERTISEMENT

ಕರಾವಳಿ ಸೇರಿ ವಿವಿಧೆಡೆ ಮಳೆ: ಐದು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 4:54 IST
Last Updated 21 ಏಪ್ರಿಲ್ 2021, 4:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ ಶಿವಮೊಗ್ಗ, ಮಂಡ್ಯ, ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಂಗಳವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಶಿವಮೊಗ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವಡೆ ಗುಡುಗು ಸಹಿತ ಭಾರಿ‌ ಮಳೆಯಾಗಿದೆ. ನಗರದ ಮಿಳಘಟ್ಟದ ಮೂರನೇ ತಿರುವಿನಲ್ಲಿ ಮನೆ ಮೇಲೆ ಗಾಳಿಗೆ ತೆಂಗಿನ ಮರವೊಂದು ಉರುಳಿ ಬಿದ್ದಿದೆ. ತೀರ್ಥಹಳ್ಳಿ, ಕೋಣಂದೂರು ಸುತ್ತಮುತ್ತಲೂ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಮತ್ತು ಚಿಕ್ಕಜಾಜೂರಿನಲ್ಲಿ ಮಂಗಳವಾರ ಸಂಜೆ ಸಾಧಾರಣ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಕಸಬಾ ಹಾಗೂ ಮಾಡದಕೆರೆ ಹೋಬಳಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ.

ADVERTISEMENT

ಮಳೆ ಸ್ವಲ್ಪ ಹೊತ್ತಿನಲ್ಲಿಯೇ ಕ್ಷೀಣಿಸಿತು. ಅನ್ನದಾತರಲ್ಲಿ ಬೇಸರ ಉಂಟಾಯಿತು. ಬಿರುಗಾಳಿಗೆ ಕೆಲವೆಡೆ ತೆಂಗು, ಅಡಿಕೆ, ಬಾಳೆ ತೋಟ ಹಾಗೂ ಕೋಳಿಫಾರಂ, ಮನೆಗಳಿಗೆ ಹಾನಿಯಾಗಿದೆ.

ಆಲಿಕಲ್ಲು ಮಳೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಅರ್ಧ ತಾಸು ಗುಡುಗು ಸಹಿತ ಮಳೆ ಸುರಿಯಿತು. ಪಕ್ಕದ ಆರುಂಡಿ, ಕೆಂಚಿಕೊಪ್ಪ ಭಾಗದಲ್ಲಿ ಆಲಿಕಲ್ಲು ಮಳೆ ಆಗಿದ್ದರೆ, ಸವಳಂಗ, ಚೀಲೂರು, ಗೋವಿನಕೋವಿ, ಚಟ್ನಹಳ್ಳಿ, ಬೆಳಗುತ್ತಿ, ಮುಸ್ಸೆನಾಳ್ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯ ಶನಿವಾರಸಂತೆ ಸುತ್ತಮುತ್ತ ತುಂತುರು ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲವೆಡೆ ಸೋಮವಾರ ರಾತ್ರಿ ಗುಡುಗು ಮಿಂಚು ಸಹಿತ ಮಳೆಯಾಯಿತು.

ಸಿಡಿಲು ಬಡಿದು ಇಬ್ಬರಿಗೆ ಗಾಯ: ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಯ ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಕೊಟ್ಟಿಗೆಹಾರ, ಬೀರೂರು, ತರೀಕೆರೆಯಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಕೊಪ್ಪ, ಅಜ್ಜಂಪುರ, ಕಳಸ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಒಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಕಾಫಿ, ಕಾಳು ಮೆಣಸು ಬೆಳೆಗಳಿಗೆ ನೀರಿನ ಕೊರತೆ ನೀಗಿದೆ. ವಾತಾವರಣವೂ ತಂಪಾಗಿದ್ದು, ಸೆಕೆಯಿಂದ ಬಳಲುತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

'ಐದು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ'

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಏ.21 ಮತ್ತು 22ರಂದು ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

‘ಕರಾವಳಿ ಜಿಲ್ಲೆಗಳಲ್ಲಿ ಏ.25ರವರೆಗೆ ಮಳೆಯಾಗುವ ನಿರೀಕ್ಷೆ ಇದೆ. ತುಮಕೂರು, ಮೈಸೂರು, ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ಮಳೆ–ಎಲ್ಲಿ, ಎಷ್ಟು?:ಚಿಕ್ಕಬಳ್ಳಾಪುರ ಜಿಲ್ಲೆಯ ತೊಂಡೇಬಾವಿ ಹಾಗೂ ತುಮಕೂರು ಜಿಲ್ಲೆಯ ಶಿರಾದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಗೌರಿಬಿದನೂರು, ಮಳವಳ್ಳಿ, ಮಲೆಮಹದೇಶ್ವರ ಬೆಟ್ಟ 2, ಚಾಮರಾಜನಗರ, ಬಂಡೀಪುರ, ಟಿ.ನರಸೀಪುರ ಹಾಗೂ ತುರುವೇಕೆರೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕಲಬುರ್ಗಿಯಲ್ಲಿ 40.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 39, ಬೀದರ್, ವಿಜಯಪುರ 38, ಚಿಂತಾಮಣಿ, ದಾವಣಗೆರೆ, ಕೊಪ್ಪಳ 36, ಮೈಸೂರು, ಮಂಡ್ಯ, ಬೆಂಗಳೂರು 35 ಹಾಗೂ ಚಿಕ್ಕಮಗಳೂರಿನಲ್ಲಿ 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.