ADVERTISEMENT

ಧಾರವಾಡ, ಅಣ್ಣಿಗೇರಿಯಲ್ಲಿ ಮಳೆ ಅಬ್ಬರ

ಬಾಗಲಕೋಟೆ, ಬೆಳಗಾವಿಯಲ್ಲಿ ಸಿಡಿಲಿಗೆ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST
ಧಾರವಾಡದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಟೋಲ್‌ನಾಕಾ ಬಳಿಯ ಬಿಆರ್‌ಟಿಎಸ್‌ ರಸ್ತೆ ಜಲಾವೃತಗೊಂಡಿತ್ತು
ಧಾರವಾಡದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಟೋಲ್‌ನಾಕಾ ಬಳಿಯ ಬಿಆರ್‌ಟಿಎಸ್‌ ರಸ್ತೆ ಜಲಾವೃತಗೊಂಡಿತ್ತು   

ಧಾರವಾಡ/ ಬಾಗಲಕೋಟೆ: ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಹಲವೆಡೆ ಸೋಮವಾರ ಧಾರಾಕಾರ ಮಳೆಯಾಗಿದೆ.

ಬಾಗಲಕೋಟೆ ಜಿಲ್ಲೆ ರಬಕವಿ–ಬನಹಟ್ಟಿ ತಾಲ್ಲೂಕಿನ ಕುಲ್ಲಹಳ್ಳಿಯ ಹನಮಂತ ಅಮ್ಮಾಜಿಗೋಳ (21), ಸಿಡಿಲು ಬಡಿದು ಸೋಮವಾರ
ಮೃತಪಟ್ಟಿದ್ದಾರೆ. ಸಂಜೆ, ಹೊಲದಿಂದ ಮನೆಗೆ ಮರಳುವಾಗ ಸಿಡಿಲು ಬಡಿದಿದೆ.

ಧಾರವಾಡ ಸೇರಿದಂತೆ ಜಿಲ್ಲೆಯ ಅಣ್ಣಿಗೇರಿಯಲ್ಲಿ ಬಿರುಸಿನಿಂದ ಹಾಗೂ ನವಲಗುಂದ ಹಾಗೂ ಕುಂದಗೋಳದಲ್ಲಿ ತುಂತುರು ಮಳೆಯಾಗಿದೆ.

ADVERTISEMENT

ಧಾರವಾದಲ್ಲಿ ಸೋಮವಾರ ನಸುಕಿನಲ್ಲೂ ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು. ಮತ್ತೆ ಸಂಜೆ 4ರ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದು ತಾಸು ಸುರಿಯಿತು. ಇದರಿಂದ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡವು.

ನಗರದ ಎನ್‌ಟಿಟಿಎಫ್‌, ತೇಜಸ್ವಿ ನಗರ, ಟೋಲ್ ನಾಕಾ ಬಳಿ ನೀರು ರಸ್ತೆ ಮೇಲೆ ನಿಂತಿತ್ತು. ಇದರಿಂದಾಗಿ, ವಾಹನಗಳು ಸುಮಾರು ಅರ್ಧ ತಾಸು ಸರಿದಾಡದೆ ನಿಂತಿದ್ದವು. ತ್ವರಿತಗತಿಯ ಬಸ್‌ ಸಂಚಾರ ವ್ಯವಸ್ಥೆ (ಬಿಆರ್‌ಟಿಎಸ್‌) ರಸ್ತೆಯೂ ಜಲಾವೃತವಾಗಿತ್ತು.

ಜನ್ನತ್‌ ನಗರ ಹಾಗೂ ಟೋಲ್‌ನಾಕಾ ಬಳಿಯ ಕೆಲ ತಗ್ಗು ಪ್ರದೇಶಗಳಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಪರದಾಡಿದರು.

ಹಾವೇರಿ ಸೇರಿದಂತೆ ಜಿಲ್ಲೆಯ ಬ್ಯಾಡಗಿ, ಗುತ್ತಲದಲ್ಲಿ ಹಾಗೂ ಗದಗ ಜಿಲ್ಲೆಯ ನರಗುಂದದಲ್ಲಿ ಸಾಧಾರಣ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆ ಕೆರೂರಿನಲ್ಲಿ ಭಾರಿ ಗಾಳಿಯೊಂದಿಗೆ ಮಳೆಯಾಗಿದೆ.

ಬೆಳಗಾವಿಯಲ್ಲೂ ಮಳೆ: ಜಿಲ್ಲೆಯ ಬೈಲಹೊಂಗಲ, ರಾಮದುರ್ಗ ತಾಲ್ಲೂಕಿನಲ್ಲಿ ಮಳೆಯಾಗಿದೆ. ರಾಮದುರ್ಗ ತಾಲ್ಲೂಕಿನ ಚಿಕ್ಕೊಪ್ಪ ಎಸ್‌ಕೆ ಗ್ರಾಮದಲ್ಲಿ, ಬಾಲಪ್ಪ ನಾಗಪ್ಪ ಕಳಸದ (22) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲೆಂದು ಹೊಲದಲ್ಲಿನ ಬನ್ನಿ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.