ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಳಗೇರಿ ಗ್ರಾಮದ ಹತ್ತಿರದ ಹಳ್ಳದ ಸೇತುವೆಯ ರಸ್ತೆ ಕಿತ್ತು ಹೋಗಿರುವುದು
ಮಂಗಳೂರು/ಮೈಸೂರು: ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಮಂಗಳವಾರ ನಸುಕಿನಿಂದಲೇ ಎಡೆ ಬಿಡದೆ ಮಳೆಯಾಗಿದ್ದು, ಮಳೆಗಾಲದ ವಾತಾವರಣ ಸೃಷ್ಟಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಪ್ರಾರಂಭವಾದ ಮಳೆ ಮಂಗಳವಾರ ಬೆಳಗಿನವರೆಗೂ ಎಡೆಬಿಡದೆ ಸುರಿದರೆ, ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬೆಳಿಗ್ಗೆ 3 ಗಂಟೆ ಬಿರುಸಿನ ಮಳೆ ಆಗಿದೆ.
ಕೆಲವೆಡೆ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ವರದಿಯಾಗಿದೆ.
ಹಳೆ ಮೈಸೂರು ಭಾಗದಲ್ಲೂ ಮಳೆಯಾಯಿತು. ಕೊಡಗು ಜಿಲ್ಲೆಯ ಕುಶಾಲನಗರ, ಸುಂಟಿಕೊಪ್ಪ, ನಾಪೋಕ್ಲು ಹಾಗೂ ಸೋಮವಾರಪೇಟೆಯಲ್ಲೂ ಬಿರುಸಿನ ಮಳೆಯಾಗಿದೆ.
ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ. ಹಳೇಬೀಡಿಗೆ ಭೇಟಿ ನೀಡಿದ್ದ ಪ್ರವಾಸಿಗರು ಛತ್ರಿ ಹಿಡಿದುಕೊಂಡು ಹೊಯ್ಸಳೇಶ್ವರ ದೇವಸ್ಥಾನವನ್ನು ವೀಕ್ಷಿಸಿದರು. ಹಾಸನದಲ್ಲಿ ಮಳೆಯ ಮಧ್ಯೆಯೇ ವಿದ್ಯಾರ್ಥಿಗಳು ತಿರಂಗಾ ಯಾತ್ರೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಬಳಿ ಮರವೊಂದು ಖಾಸಗಿ ಬಸ್, ಮಿನಿ ಬಸ್ ಮತ್ತು ಬೈಕ್ ಮೇಲೆ ಬಿದ್ದಿದೆ. ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದ್ದು, ಬಸ್ ಮುಂಭಾಗ ಜಖಂಗೊಂಡಿದೆ. ಕೊಟ್ಟಿಗೆಹಾರ– ಕಳಸ ರಾಜ್ಯ ಹೆದ್ದಾರಿಯಲ್ಲಿ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಸಿಡಿಲು: ಐವರ ಸಾವು
ಕಲಬುರಗಿ/ಹುಬ್ಬಳ್ಳಿ: ಐವರು ಸಿಡಿಲು ಬಡಿದು ಮಂಗಳವಾರ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ರೈತ ನಬಿಲಾಲ ಚೌಧರಿ(70) ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದಾರೆ.
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ದೇವಕಿ ಮ್ಯಾಗೇರಿ (40), ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಹಿರೆನೇರ್ತಿ ಗ್ರಾಮದ ಹೊರವಲಯದ ಕೆರೆಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಹಿರೇಹರಕುಣಿ ಗ್ರಾಮದ ಮೈಲಾರಪ್ಪ ಬಸವರಾಜ ಉಣಕಲ್ (18) ಸಿಡಿಲು ಬಡಿದು ಮೃತಪಟ್ಟರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕೋಳೂರು ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಬಸನಗೌಡ ಲಕ್ಷ್ಮಣ ಗೌಡ ಬಿರಾದಾರ (63), ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಕುರಿ ಕರಿಬಸಪ್ಪ ಕುರಿ ಮೂರ್ತಿ (23) ಮೃತಪಟ್ಟಿದ್ದಾರೆ. ಹೊಲದಲ್ಲಿದ್ದ ಎಮ್ಮೆ ಮತ್ತು ಕರು ಪ್ರಾಣ ಬಿಟ್ಟಿವೆ. ದೇವರಹಿಪ್ಪರಗಿ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು 6 ಕುರಿಗಳು ಸತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.