ADVERTISEMENT

ರಾಜ್ಯದಲ್ಲಿ ಧಾರಾಕಾರ ಮಳೆ: ಮುಸಲಧಾರೆಗೆ ಜನರು ಹೈರಾಣ

ಕಾಳಜಿ ಕೇಂದ್ರದಲ್ಲಿ ಸಾವಿರಾರು ಜನರಿಗೆ ಆಶ್ರಯ l ನೂರಾರು ಜಾನುವಾರು ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:00 IST
Last Updated 4 ಆಗಸ್ಟ್ 2022, 21:00 IST
ತೆಪ್ಪದಲ್ಲಿ ತೆರಳಿದ ಬಾಣಂತಿ–ಶಿಶು
ತೆಪ್ಪದಲ್ಲಿ ತೆರಳಿದ ಬಾಣಂತಿ–ಶಿಶು   

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರವೂ ಧಾರಾಕಾರ ಮಳೆಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದರೆ, ತುಮಕೂರು ಜಿಲ್ಲೆಯಲ್ಲಿ ಬುಧವಾರ ರಾತ್ರಿ ನೀರಿನಲ್ಲಿ ಕೊಚ್ಚಿಕೊಂಡು ಹೋದವರಿಗಾಗಿ ಹುಡುಕಾಟ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಮಾರ್ಪಡ್ಕ ಸೇತುವೆ ನೀರು ಪಾಲಾಗಿದ್ದು, ಊರುಬೈಲು ಭಾಗದ 200 ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕುರುಡುಗನಹಳ್ಳಿಯ ಲಕ್ಷ್ಮಮ್ಮ (70) ಜಮೀನಿಗೆ ಹೋಗಿದ್ದು, ವಾಪಸ್ ಬರುವಾಗ ಹುಂಜಿನಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಶವ ಪತ್ತೆಯಾಗಿದೆ. ಗುಬ್ಬಿ ತಾಲ್ಲೂಕಿನ ಕೋಣೆಮಾದನಹಳ್ಳಿಯ ಅರುಣ್ ಕುಮಾರ್ (30) ಮೇವು ತರುವ ಸಂದರ್ಭದಲ್ಲಿ ನೀರಿನಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ADVERTISEMENT

ಬುಧವಾರ ರಾತ್ರಿ ನೀರಿನಲ್ಲಿ ಕೊಚ್ಚಿಕೊಂಡು ಹೋದವರಿಗಾಗಿ ಹುಡುಕಾಟ ನಡೆದಿದ್ದು, ಗುರುವಾರ ಸಂಜೆವರೆಗೂ ಪತ್ತೆಯಾಗಿಲ್ಲ. ಮಧುಗಿರಿ ತಾಲ್ಲೂಕು ನಾಗಲಾಪುರ ಗ್ರಾಮದ ಸಮೀಪ ಹಳ್ಳ ದಾಟುತ್ತಿದ್ದಾಗ ದ್ವಾರಪ್ಪ (69) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ- ಸೊಪ್ಪನಹಳ್ಳಿ ಮಧ್ಯೆ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಸಂಚರಿಸುತ್ತಿದ್ದ ವ್ಯಾನ್ ಕೊಚ್ಚಿಕೊಂಡು ಹೋಗಿದೆ. ಅದರಲ್ಲಿದ್ದ ಪಟೇಲ್ ಕುಮಾರಸ್ವಾಮಿ ಕೊಚ್ಚಿಕೊಂಡು ಹೋಗಿದ್ದಾರೆ.

ಮೈಸೂರು ಭಾಗದ ಮೈಸೂರು, ಕೊಡಗು, ಹಾಸನ, ಮಂಡ್ಯದಲ್ಲಿ ಗುರುವಾರವೂ ಧಾರಾಕಾರ ಮಳೆಮುಂದುವರಿದಿದ್ದು, ಜಲದಿಗ್ಬಂಧನದ ವಾತಾವರಣ ಏರ್ಪಟ್ಟಿದೆ.

ಮಂಡ್ಯ ನಗರದ ಬೀಡಿ ಕಾರ್ಮಿಕರ ಕಾಲೊನಿ ನಡುಗಡ್ಡೆಯಂತಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಕಾಳಜಿ ಕೇಂದ್ರ ತೆರೆಯಲಾಗಿದ್ದು ಸಾವಿರಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ.

ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿಯಲ್ಲಿ ಮನೆಯ ಚಾವಣಿ ಕುಸಿದು ಹಸುವೊಂದು ಮೃತಪಟ್ಟಿದೆ. ಚಂದೂಪುರದಲ್ಲಿ ಕೋಳಿ, ಮೇಕೆ ಫಾರಂಗೆ ಶಿಂಷಾ ನದಿ ನೀರು ನುಗ್ಗಿ, 500 ಕೋಳಿ, 16 ಮೇಕೆ, 2 ಹಸು ಮೃತಪಟ್ಟಿವೆ.

ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯಲ್ಲಿ ಬೆಟ್ಟಗುಡ್ಡಗಳಿಂದ ಕೆಸರು ಮಿಶ್ರಿತ ನೀರು ಹರಿಯುತ್ತಿದ್ದು, ಕಲ್ಲು–ಮಣ್ಣು ರಸ್ತೆಗೆ ಕುಸಿದಿರುವುದರಿಂದ ಜನರ ರಕ್ಷಣೆ, ಕೆಸರು ತೆರವು ಕಾರ್ಯಾಚರಣೆಗೂ ಅಡ್ಡಿಯಾಗಿದೆ.

ಭಾಗಮಂಡಲ, ಕರಿಕೆ, ತಣ್ಣಿಮಾಣಿ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಒಂದೇ ರಾತ್ರಿಯಲ್ಲಿ 19 ಸೆಂ.ಮೀ ಮಳೆಯನ್ನು ಕಂಡಿರುವಚೆಂಬು ಗ್ರಾಮಸ್ಥರು ಹೈರಾಣಾಗಿದ್ದಾರೆ. ಗ್ರಾಮವನ್ನು ಸಂಪರ್ಕಿಸುವ ದಬ್ಬಡ್ಕ, ಮಾರ್ಪಡ್ಕ, ಊರುಬೈಲು ಸೇತುವೆಗಳು ಕೊಚ್ಚಿಕೊಂಡು ಹೋಗಿವೆ.

ಕಬಿನಿ, ಕೆಆರ್‌ಎಸ್‌ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕೊಳ್ಳೇ
ಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.

ಹಾಸನ ಜಿಲ್ಲೆಯ ಶ್ರವಣಬೆಳಗೊಳ ಹೋಬಳಿಯ ಬೆಕ್ಕ ಗ್ರಾಮದ ಕೆರೆಯ ಏರಿ ಬುಧವಾರ ರಾತ್ರಿ ಒಡೆದು ಜನವಸತಿ ಪ್ರದೇಶಕ್ಕೆ ನೀರು ನುಗ್ಗಿತ್ತು. ಮನೆಯಲ್ಲಿದ್ದ ಬಾಣಂತಿ ಹಾಗೂ ಒಂದೂವರೆ ತಿಂಗಳ ಹಸುಗೂಸನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದರು.

ಹಾಸನ ತಾಲ್ಲೂಕಿನ ಅಂಕಪುರದಲ್ಲಿ ಮನೆ ಗೋಡೆ ಕುಸಿದು ದಂಪತಿ ಗಾಯಗೊಂಡರು. ಹಬಾಗೂರು ಕೆರೆ ಕೋಡಿಯಿಂದ ನುಗ್ಗೇಹಳ್ಳಿ–ನವಿಲೆ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಶಿರಾಡಿ: ರಾತ್ರಿಯೂ ಸಂಚಾರಕ್ಕೆ ಅನುಮತಿ

ಹಾಸನ: ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ಭೂಕುಸಿತವಾದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ಸಡಿಲಿಸಿ, ಪ್ರಯಾಣಿಕ ಬಸ್‌ಗಳು ಈ ಮಾರ್ಗದಲ್ಲಿ ರಾತ್ರಿ ವೇಳೆಯೂ ಸಂಚರಿಸಲು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ ಅನುಮತಿ ನೀಡಿದ್ದಾರೆ.

ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು, ರಾಜಹಂಸ, ಐರಾವತ, ಅಂಬಾರಿ, ಡ್ರೀಮ್‌ ಕ್ಲಾಸ್ ಸ್ಪೀಪರ್‌, ನಾನ್‌ ಎಸಿ ಸ್ಪೀಪರ್‌, ಸ್ಕ್ಯಾನಿಯಾ, ಮಲ್ಟಿ ಆಕ್ಸೆಲ್‌ ವೋಲ್ವೊ ಬಸ್‌ಗಳಲ್ಲಿ ಜನ ಸಂಚರಿಸಬಹುದು.

ತೆಪ್ಪದಲ್ಲಿ ತೆರಳಿದ ಬಾಣಂತಿ–ಶಿಶು

ರಾಮನಗರ: ಮಾಗಡಿ ತಾಲ್ಲೂಕಿನ ಈಡಿಗರಪಾಳ್ಯದಲ್ಲಿ ಗುರುವಾರ ಸೌಭಾಗ್ಯಾ ಎಂಬ ಬಾಣಂತಿ ತನ್ನ ಆರು ದಿನದ ಶಿಶುವಿನೊಂದಿಗೆ ತೆಪ್ಪದಲ್ಲಿ ತೆರಳಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದರು.
ಸೌಭಾಗ್ಯಾಗೆ ಆರು ದಿನಗಳ ಹಿಂದೆ ಸೋಲೂರು ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಬಾಣಂತಿ ಹಾಗೂ ಮಗುವನ್ನು ಈಡಿಗರಪಾಳ್ಯಕ್ಕೆ ಕರೆತರಲಾಗಿತ್ತು. ಮಳೆಯಿಂದ ಈ ಗ್ರಾಮವು ಜಲಾವೃತಗೊಂಡಿದೆ. ಇದರಿಂದ ನೆರೆ ಊರುಗಳ ನಡುವೆ ಸಂಪರ್ಕ ಕಡಿತಗೊಂಡಿದೆ.

ಸ್ಥಳೀಯರ ತಿರುಗಾಟಕ್ಕೆ ಶಾಸಕರು ತೆಪ್ಪದ ವ್ಯವಸ್ಥೆ ಮಾಡಿದ್ದಾರೆ. ಆ ತೆಪ್ಪದಲ್ಲೇ ಅವರು ಸಂಚರಿಸಿ, ತಿಪ್ಪಸಂದ್ರ ಗ್ರಾಮದ ಮುಖ್ಯರಸ್ತೆ ತಲುಪಿ ನಂತರ ಸೋಲೂರು ಆಸ್ಪತ್ರೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.