ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದರ್ಗಾ ದೂಧಗಂಗಾ ನದಿಯಿಂದ ಗುರುವಾರ ಜಲಾವೃತಗೊಂಡಿತು
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಗುರುವಾರವೂ ಮಳೆ ಮುಂದುವರಿದಿದೆ. ತಾಲ್ಲೂಕಿನ ಕಲ್ಲೋಳ– ಯಡೂರ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ 1.27 ಲಕ್ಷ ಕ್ಯುಸೆಕ್ ನೀರು ಹರಿದಿದೆ.
ಮಂಗಳೂರು/ಮಡಿಕೇರಿ/ಚಿಕ್ಕೋಡಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆಯವರೆಗೆ ಉತ್ತಮ ಮಳೆಯಾಗಿದೆ. ಗುರುವಾರವೂ ದಿನ ವಿಡೀ ಬಿಟ್ಟು ಬಿಟ್ಟು ಮಳೆ ಸುರಿಯಿತು.
ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮಡಿಕೇರಿ ನಗರ ಸೇರಿದಂತೆ ಹಲವೆಡೆ ಗುರುವಾರ ದಿನವಿಡೀ ಮಳೆಯಾಯಿತು. ಮೈಸೂರಿನಲ್ಲೂ ಗುರುವಾರ ಆಗಾಗ್ಗೆ ಮಳೆಯಾಯಿತು.
ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಜಿಲ್ಲೆಯ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಗುರುವಾರವೂ ಮಳೆ ಮುಂದುವರಿದಿದೆ. ತಾಲ್ಲೂಕಿನ ಕಲ್ಲೋಳ– ಯಡೂರ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ 1.27 ಲಕ್ಷ ಕ್ಯುಸೆಕ್ ನೀರು ಹರಿದಿದೆ.
ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಮಳೆಯ ತೀವ್ರತೆ ಜೋರಾಗಿತ್ತು.
ಉಡುಪಿ ಜಿಲ್ಲೆಯ ಕಾಲ್ತೋಡುವಿನಲ್ಲಿ 16 ಸೆಂ.ಮೀ, ಕಿರಿಮಂಜೇಶ್ವರ 14, ಕೆರ್ಗಾಲು, ಹೇರೂರು ಹಾಗೂ ಕಂಬದಕೋಣೆ, ಹಳ್ಳಿಹೊಳೆ ಮತ್ತು ಚಿತ್ತೂರಿನಲ್ಲಿ ತಲಾ 12, ಮರವಂತೆ, ಗೋಳಿಹೊಳೆ ಹಾಗೂ ಬಳ್ಕೂರಿನಲ್ಲಿ ತಲಾ 11ಸೆಂ.ಮೀ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ 15, ಇರಾ 13, ವಿಟ್ಲಪಡ್ನೂರಿನಲ್ಲಿ 12, ಬೊಳಿಯಾರು, ಬಾಳ್ತಿಲ, ಕೆಮ್ರಾಜೆ ಹಾಗೂ ಇಡ್ಕಿದುವಿನಲ್ಲಿ ತಲಾ 10 ಸೆಂ.ಮೀ ಮಳೆಯಾಗಿದೆ.
ಉಡುಪಿಯಲ್ಲಿ ರೆಡ್ ಅಲರ್ಟ್: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗಾಳಿ ಹಾಗೂ ಸಿಡಿಲುಗಳೊಂದಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಗೆ ಇದೇ ಶುಕ್ರವಾರ ರೆಡ್ ಅಲರ್ಟ್ ಹಾಗೂ ಶನಿವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಇದೇ ಶುಕ್ರವಾರ ಮತ್ತು ಶನಿವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 99,917 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ದೂಧ ಗಂಗಾ ನದಿಯಲ್ಲೂ 26,400 ಕ್ಯುಸೆಕ್ ಹರಿವು ಇದೆ. ಕೊಯ್ನಾ ಅಣೆಕಟ್ಟೆಯಿಂದ 33,050 ಕ್ಯುಸೆಕ್ ನೀರನ್ನು ಗುರುವಾರ ಬೆಳಿಗ್ಗೆ 6ರಿಂದ ಬಿಡುಗಡೆ ಮಾಡಲಾಗುತ್ತಿದೆ. ಶುಕ್ರವಾರ ನಸುಕಿನ ವೇಳೆ ಈ ನೀರು ಕೂಡ ಜಿಲ್ಲೆ ಪ್ರವೇಶಿಸಲಿದೆ.
ಕೊಯ್ನಾ ಜಲಾಶಯದಂದ 2 ಲಕ್ಷ ಕ್ಯುಸೆಕ್ ನೀರು ಹರಿಸಿದರೆ ಜಿಲ್ಲೆಯ ಕೃಷ್ಣಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ. ಆದರೆ, ಈಗಾಗಲೇ ಕೃಷ್ಣಾ ನದಿಯಲ್ಲಿ 1.27 ಲಕ್ಷ ಕ್ಯುಸೆಕ್ ನೀರಿದ್ದು ನದಿ ಮಟ್ಟ ಏರಿಕೆಯಾಗಿದೆ. ಕೊಯ್ನಾದಿಂದ 1 ಲಕ್ಷ ಕ್ಯುಸೆಕ್ ಹರಿಸಿದರೂ ಪ್ರವಾಹ ತಲೆದೋರುವ ಆತಂಕ ಎದುರಾಗಿದೆ.
ಇನ್ನೊಂದೆಡೆ, ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜಿನಲ್ಲಿ 1.14 ಲಕ್ಷ ಕ್ಯುಸೆಕ್ ಒಳ ಹರಿವು, 1.13 ಲಕ್ಷ ಕ್ಯುಸೆಕ್ ಹೊರ ಹರಿವು ಇದೆ.ಬ್ಯಾರೇಜ್‌ನ ಹಿನ್ನೀರು ಕೂಡ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ಸಂಗ್ರಹ ಆಗುತ್ತಿದೆ.
ಉಗಾರ– ಕುಡಚಿ ಸೇತುವೆ ಸೇರಿ 8 ಸೇತುವೆಗಳು ಜಲಾವೃತಗೊಂಡಿವೆ. ಕಲ್ಲೋಳ ಬಳಿ ಕೃಷ್ಣಾ ನದಿ ತೀರದಲ್ಲಿರುವ ದತ್ತ ಮಂದಿರ, ದೂಧಗಂಗಾ ನದಿ ತೀರದಲ್ಲಿರುವ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದರ್ಗಾ ಜಲಾವೃತಗೊಂಡಿವೆ.
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ 90.45 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಮೊದಲ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಹರ್ಷಗೊಂಡಿದ್ದಾರೆ.
ಆಗಸ್ಟ್ 10ರ ರಾತ್ರಿ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋದ ಬಳಿಕ 36 ಟಿಎಂಸಿ ಅಡಿ ನೀರು ಪೋಲು ಆಗಿತ್ತು. ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಲಾಯಿತು. 12 ದಿನಗಳಲ್ಲಿ 20 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಗರಿಷ್ಠ 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ ನೀರಿನ ಮಟ್ಟ 1629 ಅಡಿ ಇದೆ. ಒಳಹರಿವಿನ ಪ್ರಮಾಣ 30,919 ಕ್ಯುಸೆಕ್ ಇದೆ. ನಾಲ್ಕು ಅಡಿ ನೀರು ಬಂದರೆ (15 ಟಿಎಂಸಿ ಅಡಿ ನೀರು), ಅಣೆಕಟ್ಟು ಭರ್ತಿಯಾಗಲಿದೆ.
‘ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ. ಇನ್ನಷ್ಟು ನೀರು ಹರಿದು ಬರುವ ನಿರೀಕ್ಷೆ ಇದೆ. ಜಲಾಶಯದಲ್ಲಿ 98 ಟಿಎಂಸಿ ಅಡಿ ನೀರು ಸಂಗ್ರಹವಾದ ಕೂಡಲೇ ಕೆಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುವ ಸಾಧ್ಯತೆ ಇದೆ’ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಾರಿ ಹಿಂಗಾರು ಮಳೆ ಸಹ ಉತ್ತಮವಾಗುವ ನಿರೀಕ್ಷೆಯಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮತ್ತೆ ನೀರಿನ ಒಳಹರಿವು ಹೆಚ್ಚಾಗಿ, 90 ಟಿಎಂಸಿ ಅಡಿಗಿಂತ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಎರಡನೇ ಬೆಳೆಗೂ ನೀರು ಸಿಗಲಿದೆ.
ಅಫಜಲಪುರ (ಕಲಬುರಗಿ ಜಿಲ್ಲೆ): ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯದಿಂದ ಹೊರಬಿಟ್ಟ 1.45 ಲಕ್ಷ ಕ್ಯುಸೆಕ್ ನೀರಿನ ಪೈಕಿ 1.40 ಲಕ್ಷ ಕ್ಯುಸೆಕ್ ನೀರು ಬುಧವಾರ ರಾತ್ರಿ ಭೀಮಾ ಜಲಾಶಯ ತಲುಪಿದ್ದು, ಘತ್ತರಗಿ ಹಾಗೂ ದೇವಲ ಗಾಣಗಾಪುರದ ಬ್ರಿಡ್ಜ್ ಕಮ್ ಬ್ಯಾರೇಜ್ ಜಲಾವೃತವಾಗಿವೆ.
‘ಬ್ಯಾರೇಜ್ ತಲುಪಿದಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಟ್ಟಿದ್ದರಿಂದ ಗುರುವಾರ ಘತ್ತರಗಿ ಗ್ರಾಮದ ಸೇತುವೆ, ದೇವಲ ಗಾಣಗಾಪುರದ ಸೇತುವೆಗಳ ಮೇಲೆ ನೀರು ಬಂದಿದೆ. ಜೇವರ್ಗಿ ಮತ್ತು ಸಿಂದಗಿ ತಾಲ್ಲೂಕಿನ ಗ್ರಾಮಗಳ ಸಂಪರ್ಕ ಕಡಿತವಾಗಿದೆ’ ಎಂದು ತಹಶೀಲ್ದಾರ್ ಸಂಜುಕುಮಾರ ದಾಸರ, ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ್ ತಿಳಿಸಿದರು.
‘ಮಣ್ಣೂರು ಎಲ್ಲಮ್ಮ ದೇವಿಯ ದೇವಸ್ಥಾನ ಸುತ್ತ ನೀರು ಆವರಿಸಿದ್ದು ಗೇಟ್ ಬಂದ್ ಮಾಡಲಾಗಿದೆ’ ಎಂದರು.
ಗುರುವಾರ ಸಂಜೆ 6ರಿಂದ ಸೊನ್ನ ಭೀಮಾ ಬ್ಯಾರೇಜ್‌ನಿಂದ 70 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಕಂಡುಬಂದ ಜಲರಾಶಿ
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಭೀಮಾ ನದಿಗೆ ಬಿಟ್ಟಿದ್ದರಿಂದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಬಳಿಯ ಬ್ರಿಡ್ಜ್ ಕಮ್ ಬ್ಯಾರೇಜ್ ಗುರುವಾರ ಜಲಾವೃತವಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.