ADVERTISEMENT

ಮತಕ್ಕೆ ದಾಳವಾದ ‘ಹೇಮಾವತಿ’ ನೀರು

ಲೋಕಸಭಾ ಚುನಾವಣೆ: ಕಲ್ಪತರು ನಾಡಿನಲ್ಲಿ ಮುನ್ನೆಲೆಗೆ ಬಂದ ನೀರಿನ ರಾಜಕೀಯ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಏಪ್ರಿಲ್ 2019, 20:24 IST
Last Updated 10 ಏಪ್ರಿಲ್ 2019, 20:24 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ತುಮಕೂರು: ಹೇಮಾವತಿ ನದಿ ನೀರು ಜಿಲ್ಲೆಗೆ ಬಂದು ಮೂರು ದಶಕಗಳು ಮೀರಿವೆ. ಆದರೆ ಹೇಮೆಯನ್ನು ಜಿಲ್ಲೆಗೆ ತರುವ ದಿನದಿಂದ ಆರಂಭವಾದ ನೀರಿನ ರಾಜಕಾರಣದ ‘ಆಟ’ಗಳು ಇಂದಿಗೂ ಚಾಲ್ತಿಯಲ್ಲಿವೆ.

ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಹೇಮಾವತಿ ನೀರಿನ ರಾಜಕಾರಣದ ದಾಳಗಳು ಹೇರಳವಾಗಿ ಸದ್ದು ಮಾಡುತ್ತವೆ. ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ‘ಹೇಮಾವತಿ’ ರಾಜಕಾರಣ ತೀವ್ರವಾಗಿಯೇ ಪ್ರವಹಿಸಿದೆ.

ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಿಂದ ಪ್ರತಿ ವರ್ಷ ತುಮಕೂರು ಜಿಲ್ಲೆಗೆ 25 ಟಿಎಂಸಿ ಅಡಿ ನೀರು ಮಂಜೂರಾಗಿದೆ. ಆದರೆ ಈ ನೀರನ್ನು ಪೂರ್ಣವಾಗಿ ಪಡೆಯಲು ಹಾಸನ ಜಿಲ್ಲೆಯ ರಾಜಕಾರಣದ ಮೇಲೆ ಬಿಗಿ ಹಿಡಿತ ಹೊಂದಿರುವ ದೇವೇಗೌಡರು ಹಾಗೂ ಅವರ ಪುತ್ರ ಸಚಿವ ಎಚ್‌.ಡಿ.ರೇವಣ್ಣ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪವನ್ನು ಬಿಜೆಪಿ ಈ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. ಈ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ‘ಹೇಮಾವತಿ’ಯನ್ನೇ ಪ್ರಚಾರಕ್ಕೆ ಪ್ರಮುಖ ವಿಷಯವನ್ನಾಗಿಸಿಕೊಂಡಿದೆ. ನೀರಿನ ವಿಚಾರ ಜೆಡಿಎಸ್ ಮತ್ತು ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಗಳನ್ನು ತೀವ್ರಗೊಳಿಸಿದೆ.

ADVERTISEMENT

ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹೇಮಾವತಿ ಕಾಮಗಾರಿ ನಿಲ್ಲಿಸಿ ತುಮಕೂರಿಗೆ ಅನ್ಯಾಯ ಮಾಡಿದ ದೊಡ್ಡ ಗೌಡ್ರು, ಹೇಮಾವತಿ ಎಂಜಿನಿಯರ್ ರತ್ನನಾಯಕ್ ಅವರನ್ನು ಸಸ್ಪೆಂಡ್ ಮಾಡಿದ ದೊಡ್ಡಗೌಡ್ರು, ತುಮಕೂರು ನಾಲೆಗೆ ಮಣ್ಣು ಸುರಿಸಿ ಪ್ರತಿಭಟನೆ ಮಾಡಿಸಿದ ದೊಡ್ಡಗೌಡ್ರು... ಇಂತಹ
ವರಿಗೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಪ್ರಚಾರ ಆರಂಭಿಸಿದ್ದಾರೆ. ತುಮಕೂರಿಗೆ ನೀರು ಹರಿಸದಂತೆ ಹಾಸನದಲ್ಲಿ ಜೆಡಿಎಸ್ ನಡೆಸಿತ್ತು ಎನ್ನಲಾದ ಪ್ರತಿಭಟನೆ ಚಿತ್ರಗಳನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಎಲ್ಲ ಪ್ರಚಾರ ಸಭೆಗಳಲ್ಲಿಯೂ ‘ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡ ಹಾಗೂ ಅವರ ಮಕ್ಕಳು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ’ ಎಂದು ಏರುಧ್ವನಿಯಲ್ಲಿ ಆರೋಪಿಸುತ್ತಿದ್ದಾರೆ.

ಬಿಜೆಪಿಯ ಈ ಟೀಕೆಯನ್ನು ಜೆಡಿಎಸ್ ಮುಖಂಡರು ‘ಸೋಲಿನ ಭಯ’ ಎಂದು ಬಣ್ಣಿಸುತ್ತಿದ್ದಾರೆ. ತುಮಕೂರಿಗೆ ಹೇಮಾವತಿ ನೀರು ಹರಿಸಿದ್ದೇ ದೇವೇಗೌಡರು ಎಂದು ಪ್ರಚಾರ ಸಭೆಗಳಲ್ಲಿ ಒತ್ತಿ ಹೇಳುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವಂತೆ 2005ರಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ದೇವೇಗೌಡರು ಬರೆದಿದ್ದ ಪತ್ರವನ್ನು ಜೆಡಿಎಸ್ ಪ್ರಸ್ತಾಪಿಸುತ್ತಿದೆ.

‘ಜಿಲ್ಲೆಗೆ ಯಾವ ಪ್ರಮಾಣದಲ್ಲಿ ಹೇಮಾವತಿ ನೀರು ಹರಿದಿದೆ ಎಂಬ ಬಗ್ಗೆ ಬಿಜೆಪಿಯವರು ಮಾಹಿತಿ ಪಡೆದು ಮಾತನಾಡಲಿ. ಚುನಾವಣೆ ಬಂದಾಗ ಮಾತ್ರ ಬಸವರಾಜು ಹೇಮಾವತಿ ವಿಚಾರದಲ್ಲಿ ಅನ್ಯಾಯವಾಗಿದೆ ಎನ್ನುತ್ತಾರೆ’ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.

‘ಹೇಮಾವತಿ ವಿಷಯದಲ್ಲಿ ಎಚ್.ಡಿ.ದೇವೇಗೌಡರು ಅನ್ಯಾಯ ಮಾಡಿಲ್ಲ. 1983ರಲ್ಲಿ ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ದೇವೇಗೌಡರು ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದರು. ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಹರಿಸುವ ಕಾಲುವೆ ನಿರ್ಮಾಣಕ್ಕೆ ₹ 300 ಕೋಟಿ ಕೇಳಿದಾಗ ಹೆಗಡೆ ಅವರು ಕೊಡಲಿಲ್ಲ. ಆಗ ದೇವೇಗೌಡರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು’ ಎಂದು ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪ ಹಾಗೂ ಡಿ.ನಾಗರಾಜಯ್ಯ ಅವರು ಹೇಳುತ್ತಾರೆ.

ಹೇಮಾವತಿಗಾಗಿ ಪಟ್ಟು ಹಿಡಿದಿದ್ದೇ ನಾನು- ಮಾಜಿ ಪ್ರಧಾನಿ ದೇವೇಗೌಡ

‘ಹೇಮಾವತಿ ವಿಚಾರದಲ್ಲಿ ನನ್ನ ಮೇಲೆ ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ತುಮಕೂರಿಗೆ ಹೇಮಾವತಿ ನೀರು ಹರಿಸಲು ನಿರ್ಮಿಸುತ್ತಿದ್ದ ಸುರಂಗ ಕುಸಿಯಿತು. ಈ ಯೋಜನೆಯನ್ನು ತಾಂತ್ರಿಕವಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ತಜ್ಞರು ಸರ್ಕಾರಕ್ಕೆ ವರದಿ ಕೊಟ್ಟರು’ ಎನ್ನುತ್ತಾರೆ ಎಚ್.ಡಿ.ದೇವೇಗೌಡ.

‘ಆಗ ನಾನೇ ಕುಸಿದ ಸುರಂಗ ಪರಿಶೀಲಿಸಿದೆ. ಈ ಯೋಜನೆಯನ್ನು ಮಾಡಬಹುದು ಎಂದು ಸಲಹೆ ಕೊಟ್ಟೆ. ಆದರೆ ಅಂದಿನ ಸರ್ಕಾರಕ್ಕೆ ಆಸಕ್ತಿ ಇರಲಿಲ್ಲ. ಪಟ್ಟು ಹಿಡಿದು ಯೋಜನೆ ಜಾರಿಗೊಳಿಸಿದೆ. ಆಗ ಮುಖ್ಯ ಎಂಜಿನಿಯರ್ ಆಗಿದ್ದ ಎಸ್.ಜಿ.ಬಾಳೆಕುಂದ್ರಿ ಅವರ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಲಾಯಿತು. ಅವರನ್ನು ನ್ಯಾಯಾಲಯಕ್ಕೆ ಅಲೆದಾಡಿಸಲಾಯಿತು. ನನ್ನನ್ನು ಈ ತನಿಖೆಯಲ್ಲಿ ಸಿಲುಕಿಸಬೇಕು ಎನ್ನುವ ಸಂಚು ನಡೆದಿತ್ತು’ ಎಂದು ನೆನಪಿಸಿಕೊಳ್ಳುವರು.

ಘನತೆಯ ಸರ್ಕಾರಕ್ಕಾಗಿ ಸ್ಪರ್ಧೆ

ತುಮಕೂರು: ‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಮನಸ್ಸು ನನಗೆ ಇರಲಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣವನ್ನು ದುಸ್ಥಿತಿಯ ಕಡೆ ತೆಗೆದುಕೊಂಡು ಹೋಗಿದ್ದಾರೆ. ರಾಷ್ಟ್ರದಲ್ಲಿ ಘನತೆಯ ಸರ್ಕಾರವನ್ನು ಮತ್ತೆ ಸ್ಥಾಪಿಸಬೇಕು ಎನ್ನುವ ಆಸೆಯಿಂದ ಸ್ಪರ್ಧೆ ಮಾಡಿದೆ’ ಎಂದು ಜೆಡಿಎಸ್ ವರಿಷ್ಠ ಹಾಗೂ ಮೈತ್ರಿ ಅಭ್ಯರ್ಥಿ ಎಚ್‌.ಡಿ. ದೇವೇಗೌಡ ಹೇಳಿದರು.

ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಮಧುಗಿರಿಯಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಪ್ರಧಾನ ಮಂತ್ರಿ ಸ್ಥಾನ ಜವಾಬ್ದಾರಿಯುತವಾದುದು. ಆದರೆ ಇದನ್ನು ನರೇಂದ್ರ ಮೋದಿ ಮರೆತಿದ್ದಾರೆ. ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಅವರ ಹಾವಭಾವ ಪ್ರಧಾನಮಂತ್ರಿ ಹುದ್ದೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ’ ಎಂದು ಟೀಕಿಸಿದರು.

‘ದೇವೇಗೌಡರಿಗೆ ಹೆದರಿ ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಲಿಲ್ಲ ಎಂದು ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಸಂಕಷ್ಟದಲ್ಲಿದ್ದ ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರಿನ ಗೆಲ್ಲಿಸಿದ್ದೇ ಒಕ್ಕಲಿಗ ಸಮುದಾಯ. ಸೋನಿಯಾ ಬಳ್ಳಾರಿಯಿಂದ ಗೆಲುವು ಕಂಡರು. ಒಬ್ಬರಿಗೊಬ್ಬರನ್ನು ಎತ್ತಿ ಕಟ್ಟುವ ಹೇಳಿಕೆಗಳನ್ನು ಪ್ರಧಾನಿ ಹುದ್ದೆಯಲ್ಲಿದ್ದವರು ನೀಡಬಾರದು’ ಎಂದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆ ಶೇ 7ರಷ್ಟು ಹೆಚ್ಚಳವಾಗಿದೆ. ಸುಳ್ಳುಗಳೇ ವಿಜೃಂಭಿಸಿವೆ’ ಎಂದು ಆರೋಪಿಸಿದರು. ಮುದ್ದಹನುಮೇಗೌಡ ಹಾಗೂ ರಾಜಣ್ಣ ಅವರು ಮೊದಲ ಬಾರಿಗೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.