ADVERTISEMENT

ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 9:40 IST
Last Updated 2 ಜುಲೈ 2021, 9:40 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ದಾವಣಗೆರೆ: ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಯಾರು ಏನೇ ಅಭಿಪ್ರಾಯ ಹೇಳಲಿ, ಪಕ್ಷದಲ್ಲಿ ಒಂದು ಸಿಸ್ಟಂ ಇದೆ. ಮುಂದಿನ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗಳಿಸುತ್ತೇವೆ. ಹೊಸದಾಗಿ ಆಯ್ಕೆಯಾದ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ಬಳಿಕ ಹೈಕಮಾಂಡ್ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುತ್ತಾರೆ. ಯಾರೊ ಒಬ್ಬರು, ಇಬ್ಬರ ತೀರ್ಮಾನ ಇಡೀ ಪಕ್ಷದ ತೀರ್ಮಾನವಲ್ಲ ಎಂದು ಹೇಳಿದರು.

‘ನಮ್ಮ ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ. ಗುಂಪುಗಾರಿಕೆ ಇಲ್ಲ. ಎಲ್ಲ ಒಗ್ಗಟ್ಟಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

’ಸಚಿವ ಶ್ರೀರಾಮುಲು ಆಪ್ತ ಸಹಾಯಕನ ವಿರುದ್ಧ ಲಂಚದ ಆರೋಪ ಕೇಳಿ ಬಂದಿರುವುದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ‘ಕೆಲಸ ಮಾಡಿಸಿಕೊಳ್ಳಲು, ಪ್ರಾಜೆಕ್ಟ್ ಕ್ಲಿಯರ್ ಮಾಡಿಕೊಡಲು ಆತ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದು ವಿಜಯೇಂದ್ರ ದೂರು ನೀಡಿದ್ದು, ತಪ್ಪು ಯಾರು ಮಾಡಿದ್ದಾರೆ ಎಂಬುದು ತಿಳಿಯಬೇಕಾದರೆ ಸಮಗ್ರ ತನಿಖೆಯಾಗಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ವಿಜಯೇಂದ್ರನೇ ನಿಜವಾದ ಸಿಎಂ

’ಇದು 20–25 ಪರ್ಸೆಂಟ್ ಸರ್ಕಾರ, ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ. ಯಡಿಯೂರಪ್ಪ ಪುತ್ರ ವಿಜಯೇಂದ್ರನೇ ನಿಜವಾದ ಮುಖ್ಯಮಂತ್ರಿ (ಡಿಫ್ಯಾಕ್ಟೊ ಚೀಫ್‌ ಮಿನಿಸ್ಟರ್) ಯಡಿಯೂರಪ್ಪ ಡಿಜ್ಯೂರೋ ಚೀಫ್ ಮಿನಿಸ್ಟರ್. ಸರ್ಕಾರದಲ್ಲಿ ಲಂಚ ನಡೆಯುತ್ತಿರುವುದು ಸತ್ಯ, ಮೊಮ್ಮಗ, ಅಳಿಯ ಸೇರಿ ಇಡೀ ಕುಟುಂಬವೇ ಲಂಚದಲ್ಲಿ ಮುಳುಗಿದೆ’ ಎಂದು ಆರೋಪಿಸಿದರು.

‘ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ನಾವು ಅನೇಕ ದಿನಗಳಿಂದ ಒತ್ತಾಯಿಸುತ್ತಿದ್ದೇವೆ. ಸುಪ್ರೀಂಕೋರ್ಟ್ ಕೂಡ ನಾವು ಹೇಳಿದ್ದನ್ನೇ ಹೇಳಿದೆ. ವಿಪತ್ತು ನಿರ್ವಹಣೆ ಕಾಯ್ದೆಯಡಿ ನಾವು ನಾವು ಒಂದು ಕುಟುಂಬಕ್ಕೆ ₹ 5ಲಕ್ಷ ಪರಿಹಾರ ನೀಡಿದ್ದೇವೆ. ಬಿಜೆಪಿಯವರು ಕೊಡಬೇಕು’ ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಹೇಳಿದ್ದೇ ವೇದ ವಾಕ್ಯನಾ?

ಕಾಂಗ್ರೆಸ್ ಒಳಜಗಳದ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟೀಕೆಗೆ ಉತ್ತರಿಸಿದ ಸಿದ್ದರಾಮಯ್ಯ ’ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ, ಅವರು ಏನು ನಮ್ಮ ಪಕ್ಷದವರಾ, ಬೇಕು ಅಂತಲೇ ಸುಳ್ಳು ಹೇಳುತ್ತಿದ್ದಾರೆ’ ಎಂದು ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.