ADVERTISEMENT

ರಾಜ್ಯಪಾಲರ ಹುದ್ದೆಗೆ ಲಂಚ: ನ್ಯಾಯಾಧೀಶರ ಹುದ್ದೆಯ ಘನತೆಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 2:52 IST
Last Updated 30 ಏಪ್ರಿಲ್ 2021, 2:52 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ರಾಜ್ಯಪಾಲರ ಹುದ್ದೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಲಂಚ ನೀಡುವ ಮೂಲಕ ನ್ಯಾಯಾಧೀಶರ ಘನತೆಗೆ ಕುಂದು ತಂದಿದ್ದಾರೆ. ರಾಜ್ಯಪಾಲರ ಹುದ್ದೆಯ ಗೌರವಕ್ಕೂ ಧಕ್ಕೆ ತಂದಿದ್ದಾರೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಖಂಡರಿಗೆ ಆಪ್ತ ಎಂದು ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸಿರುವ ಆರೋಪದಡಿ ಬಂಧಿತನಾಗಿರುವ ಯುವರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.

‘ರಾಜ್ಯಪಾಲರ ಹುದ್ದೆ, ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಆಕಾಂಕ್ಷಿಗಳಿಂದ ಯುವರಾಜ್ ಕೋಟ್ಯಾಂತರ ರೂಪಾಯಿ ಪಡೆದಿದ್ದಾರೆ ಎಂದು ಆರೋಪವಿದೆ. ಅವರಿಗೆ ಜಾಮೀನು ನೀಡಿದರೆ ಹಣ ಹೊಂದಿದವರು ಸರ್ಕಾರದಲ್ಲಿ ಹುದ್ದೆ ಖರೀದಿಸಬಹುದು ಎಂಬ ತಪ್ಪು ಸಂದೇಶ ಸಮಾಜಕ್ಕೆ ರವಾನೆ ಆಗಿಲಿದೆ. ಆದ್ದರಿಂದ ಯುವರಾಜ್ ಜಾಮೀನು ಪಡೆಯಲು ಅರ್ಹರಲ್ಲ’ ಎಂದು ಪೀಠ ಹೇಳಿತು.

ADVERTISEMENT

ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರು ವಿಲ್ಸನ್ ಗಾರ್ಡನ್ ಪೊಲೀಸರಿಗೆ ದೂರು ನೀಡಿ, ಆರ್‌ಟಿಜಿಎಸ್ ಮೂಲಕ ಮತ್ತು ನಗದು ರೂಪದಲ್ಲಿ ಹಣ ನೀಡಿದ್ದೇನೆ. ರಾಜಕೀಯ ಮುಖಂಡರನ್ನು ಭೇಟಿಯಾಗಲು 2018–19ನೇ ಸಾಲಿನಲ್ಲಿ ದೆಹಲಿಗೂ ಕರೆದೊಯ್ದಿದ್ದರು ಎಂದು ಚಂದ್ರಕಲಾ ತಿಳಿಸಿದ್ದರು.

ಯುವರಾಜ್‌ಗೆ ಅಧೀನ ನ್ಯಾಯಾಲಯ ಜಾಮೀನು ನೀಡಿರುವುದು ದುರಾದೃಷ್ಟಕರ ಎಂದು ಹೇಳಿದ ನ್ಯಾಯಮೂರ್ತಿ ನಟರಾಜನ್ ಅವರಿದ್ದ ಪೀಠ, ‘ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸದೇ ಇರುವುದು ಕೂಡ ಅತ್ಯಂತ ದುರಾದೃಷ್ಟಕರ’ ಎಂದು ಹೇಳಿತು.

ಯುವರಾಜ್ ವಿರುದ್ಧ ಹೈಗ್ರೌಂಡ್ಸ್, ಸೈಬರ್ ಕ್ರೈಮ್, ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮೂರು ಪ್ರಕರಣಗಳಲ್ಲಿ ದೋಷಾರೋಪಣೆ ಸಲ್ಲಿಸಿದ್ದಾರೆ. 2020ರ ಡಿಸೆಂಬರ್ 17ರಿಂದ ಯುವರಾಜ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.