ADVERTISEMENT

ಸಂತೋಷ್ ವಿರುದ್ಧ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 18:54 IST
Last Updated 3 ಫೆಬ್ರುವರಿ 2021, 18:54 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಹಿಂದೆ ಖಾಸಗಿ ಸಹಾಯಕರಾಗಿದ್ದ ಎನ್.ಎಸ್. ವಿನಯ್ ಅಪಹರಣಕ್ಕೆ ಯತ್ನಿಸಿದ ಆರೋಪದ ವಿಚಾರಣೆ ರದ್ದುಪಡಿಸಲು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

‘ಸಂತೋಷ್ ಅವರು ಅಪಹರಣಕ್ಕೆ ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ. ಆದರೂ ಅಧೀನ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ’ ಎಂದು ಸಂತೋಷ್ ಪರ ವಕೀಲರು ವಾದಿಸಿದರು.

‘ಸಿ.ಡಿ, ಪೆನ್‌ ಡ್ರೈವ್, ಲ್ಯಾಪ್‌ಟಾಪ್ ಮತ್ತು ಇತರ ವಸ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ನನ್ನನ್ನು ಅಪಹರಿಸಲು ಸಂತೋಷ್ ಅವರು ಒಂಬತ್ತು ಜನರನ್ನು ಕಳುಹಿಸಿದ್ದರು. ಘಟನೆ ನಡೆದ ವೇಳೆ ಸಂತೋಷ್ ಅವರು ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಯಾವುದೇ ಕ್ರಮ ಕೈಗೊಳ್ಳದಂತೆ ಯಡಿಯೂರಪ್ಪ ಅವರು ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು’ ಎಂದು ನವೀನ್ ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು, ಚಾರ್ಜ್‌ಶೀಟ್ ರದ್ದುಗೊಳಿಸಲು ನಿರಾಕರಿಸಿದರು. ‘ಕ್ರಿಮಿನಲ್ ಪಿತೂರಿ ನಡೆದಿದೆಯೋ ಇಲ್ಲವೋ ಎಂಬುದು ಸಾಬೀತಾಗಬೇಕಿದೆ. ಹೀಗಾಗಿ, ವಿಚಾರಣೆ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘2017ರ ಮೇ 11ರಂದು ಸಂಜೆ 4 ಗಂಟೆ ಸುಮಾರಿಗೆ ಕೆಲ ದುಷ್ಕರ್ಮಿಗಳು ನನ್ನನ್ನು ಅಪಹರಿಸಲು ಯತ್ನಿಸಿದ್ದರು’ ಎಂದು ವಿನಯ್ ಆರೋಪಿಸಿದ್ದರು. ದೂರು ಆಧರಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಸಂತೋಷ್ ಅವರನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.