ADVERTISEMENT

ಬಾಬಾಬುಡನ್‌ ಗಿರಿ ದತ್ತಪೀಠ ವಿವಾದ: ಸರ್ಕಾರದ ವಿರುದ್ಧ ಹೈಕೋರ್ಟ್ ಅತೃಪ್ತಿ

ಬಗೆಹರಿಯದ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:02 IST
Last Updated 14 ಅಕ್ಟೋಬರ್ 2019, 20:02 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯ ಸರ್ಕಾರಕ್ಕೆ ಬಾಬಾಬುಡನ್‌ ಗಿರಿಯ ದತ್ತಪೀಠ ವಿವಾದವನ್ನು ಶೀಘ್ರವೇ ಬಗೆಹರಿಸುವ ಮನಸ್ಸಿದ್ದಂತಿಲ್ಲ’ ಎಂದು ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.

ಈ ಸಂಬಂಧ ‘ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ’ಯ ಧರ್ಮಶ್ರೀ, ಕರ್ತಿಕೆರೆ ನಿವಾಸಿ ಯೋಗೀಶ್‌ ರಾಜ್‌ ಅರಸ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ದತ್ತಾತ್ರೇಯ ಪೀಠದ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ ರೆಡ್ಡಿ ಅವರು, ‘ವಿವಾದಿತ ಸ್ಥಳದಲ್ಲಿನ ಪೂಜಾ ಕೈಂಕರ್ಯ ನೆರವೇರಿಸುವ ತಗಾದೆಯ ಬಗ್ಗೆ ಸಚಿವ ಸಂಪುಟದ ಉಪಸಮಿತಿಯು, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತು. ಈ ಸಮಿತಿಯು ನೀಡಿದ ವರದಿ ಅಂಗೀಕರಿಸಿ 2018ರ ಮಾರ್ಚ್ 19ರಂದು ಅಧಿಸೂಚನೆ ಹೊರಡಿಸಿತು’ ಎಂದರು.

ADVERTISEMENT

‘ತಜ್ಞರ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ದತ್ತಪೀಠ ಪೂಜೆ ನೆರವೇರಿಸಲು ಮುಜಾವರ್ ನೇಮಕ ಮಾಡಿತು. ದತ್ತಪೀಠವನ್ನು ಹಿಂದೂ ಅರ್ಚಕರೇ ಪೂಜೆ ಮಾಡಬೇಕು. ಸರ್ಕಾರದ ನಿರ್ಧಾರ ಹಿಂದೂಗಳ ಭಾವನೆಗೆ ವಿರುದ್ಧವಾಗಿದೆ. ವಾಸ್ತವದಲ್ಲಿ ತಜ್ಞರ ಸಮಿತಿಯ ಸದಸ್ಯರೂ ಆಗಿದ್ದ ವಿಮರ್ಶಕ ರಹಮತ್‌ ತರೀಕೆರೆ ಅವರ ನೇಮಕದ ಬಗ್ಗೆಯೇ ನಮ್ಮ ಆಕ್ಷೇಪವಿದೆ’ ಎಂದರು.

‘ಈ ಸಂಬಂಧ ಧಾರ್ಮಿಕ ದತ್ತಿ ಆಯುಕ್ತರ ಮುಂದೆ ನಡೆದ ವ್ಯಾಜ್ಯದಲ್ಲಿ ರಹಮತ್‌ ತರೀಕೆರೆ ಪಕ್ಷಗಾರರಾಗಿದ್ದವರು. ಹೀಗಾಗಿ ವರದಿ ನೀಡಿಕೆಯಲ್ಲಿ ಅವರ ಪೂರ್ವಗ್ರಹಪೀಡಿತ ಭಾವನೆಗಳು ಅಡಗಿವೆ. ಆದ್ದರಿಂದ ಅದನ್ನು ಒಪ್ಪಲಾಗದು’ ಎಂದು ಪ್ರತಿಪಾದಿಸಿದರು.

ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ‘ದೇಶಕ್ಕೆ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳಿಂದಲೇ ಜಾಸ್ತಿ ಬೆದರಿಕೆ ಇದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಸರ್ಕಾರ ಕೂತು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಅದು ಬಿಟ್ಟು ವ್ಯಾಜ್ಯ ನಡೆಸುತ್ತಿದೆ. ಇದನ್ನೆಲ್ಲಾ ಗಮನಿಸಿದರೆ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವ ಆಸಕ್ತಿಯಿದ್ದಂತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಏತನ್ಮಧ್ಯೆ ಸರ್ಕಾರ, ‘2018ರ ಮಾರ್ಚ್‌ 19ರಂದು ಹೊರಡಿಸಿರುವ ಆದೇಶ ಜಾರಿಗೊಳಿಸುವುದಿಲ್ಲ’ ಎಂದು ಮುಚ್ಚಳಿಕೆ ನೀಡಿರುವುದನ್ನು ಆಧರಿಸಿ ನೀಡಲಾಗಿರುವ ಮಧ್ಯಂತರ ಆದೇಶವನ್ನು ಮುಂದುವರಿಸಿತು. ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.