
ಬೆಂಗಳೂರು: ‘ಜೆ.ಪಿ.ನಗರದ ಪುಟ್ಟೇನಹಳ್ಳಿ ಬಳಿಯ ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಸಮಿತಿ ರಚನೆ ಮಾಡಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
‘ಸಾರಕ್ಕಿ ಕೆರೆ ಬಫರ್ ವಲಯದಲ್ಲಿನ ಒತ್ತುವರಿ ತೆರವುಗೊಳಿಸಲು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗೆ ಆದೇಶಿಸಬೇಕು’ ಎಂದು ಕೋರಿ ‘ಸಾರಕ್ಕಿ ಕೆರೆ ಪ್ರದೇಶ ಅಭಿವೃದ್ಧಿ ಟ್ರಸ್ಟ್’ ಅಧ್ಯಕ್ಷ ಕೆ.ಎಸ್.ಭಟ್ (84) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
‘ಕೆರೆ ಪ್ರದೇಶ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ, ಜಿಬಿಎ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳೂ ಸೇರಿದಂತೆ ಸಂಬಂಧಪಟ್ಟಂತೆ ಅಗತ್ಯ ಎನಿಸುವ ಉಳಿದ ಪಾಲುದಾರರನ್ನು ಒಳಗೊಂಡ ಸಮಿತಿ ರಚಿಸಬೇಕು. ಮೂರು ವಾರದೊಳಗೆ ಈ ಸಮಿತಿ ರಚಿಸಿ ಆದೇಶ ಹೊರಡಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
‘ಆದೇಶದ ಅನುಪಾಲನಾ ವರದಿ ಸಲ್ಲಿಕೆಗಾಗಿ ಜೂನ್ 30ಕ್ಕೆ ಅರ್ಜಿಯನ್ನು ನ್ಯಾಯಪೀಠದ ಮುಂದೆ ಪಟ್ಟಿ ಮಾಡಬೇಕು’ ಎಂದು ರಿಜಿಸ್ಟ್ರಿಗೆ ನಿರ್ದೇಶಿಸಿರುವ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.