ಹೈಕೋರ್ಟ್
ಬೆಂಗಳೂರು: ‘ಬೆಂಗಳೂರಿನ ದಕ್ಷಿಣ ಮಹಾನಗರ ಪಾಲಿಕೆಯ ಬೀರೇಶ್ವರ ನಗರ ವಾರ್ಡ್ ಹೆಸರನ್ನು ಚುಂಚಘಟ್ಟ ಎಂದು ಬದಲಿಸಲು ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿದಾರರಿಗೆ ಹೈಕೋರ್ಟ್ ₹5 ಸಾವಿರ ದಂಡ ವಿಧಿಸಿದೆ.
ಈ ಸಂಬಂಧ ಕೋಣನಕುಂಟೆಯ ‘ರೇಣುಕಾ ಯಲ್ಲಮ್ಮನ ದೇವಸ್ಥಾನ ಟ್ರಸ್ಟ್’ ಕಾರ್ಯದರ್ಶಿ ಲಕ್ಷ್ಮಮ್ಮ ಸೇರಿದಂತೆ ಒಟ್ಟು 20 ಸದಸ್ಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
‘ಇಂತಹ ಕೋರಿಕೆಗಳನ್ನು ಪಿಐಎಲ್ ವ್ಯಾಪ್ತಿಗೆ ಒಳಪಡಿಸುವುದು ಸರಿಯಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ ಅರ್ಜಿದಾರರಿಗೆ ದಂಡ ವಿಧಿಸಿ ಆದೇಶಿಸಿತು. ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಾರ್ಡ್‌ಗಳನ್ನು ಗುರುತಿಸುವಾಗ ಇತಿಹಾಸ ಪ್ರಸಿದ್ಧ ಚುಂಚಘಟ್ಟವನ್ನು ಬೀರೇಶ್ವರ ನಗರಕ್ಕೆ ಸೇರ್ಪಡೆ ಮಾಡುವ ಮೂಲಕ ಚುಂಚಘಟ್ಟದ ಐತಿಹಾಸಿಕ ಹಿನ್ನೆಲೆಗೆ ಹಾನಿ ಉಂಟುಮಾಡಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.