ADVERTISEMENT

ಕರ್ತವ್ಯದಿಂದ ಆಶಾ ಮಾರ್ಗದರ್ಶಕಿಯರ ಬಿಡುಗಡೆ: ಹೈಕೋರ್ಟ್‌ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 18:10 IST
Last Updated 26 ಜೂನ್ 2025, 18:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ‌ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಮಾರ್ಗದರ್ಶಕಿಯರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಬೆಳಗಾವಿ ಜಿಲ್ಲೆ ಸವದತ್ತಿಯ ಜರೀನಾ ಬೇಗಂ ಮುಲ್ಲಾನವರ್‌ ಸೇರಿದಂತೆ 46 ಆಶಾ ಮಾರ್ಗದರ್ಶಕಿಯರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರು ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಶ್ರೀಧರ ಪ್ರಭು, ‘ಆಶಾ ಮಾರ್ಗದರ್ಶಕಿಯರು 10 ವರ್ಷಗಳಿಂದ ರಾಜ್ಯದಲ್ಲಿ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದಾರೆ. ಸಕಾರಣವಿಲ್ಲದೆ ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ಆದೇಶಿಸಲಾಗಿದೆ. ಇದರಿಂದ ಅವರ ಜೀವನಾಧಾರಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ, ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು. ಅವರು ತಮ್ಮ ಕೆಲಸಕ್ಕೆ ಹಾಜರಾಗಲು ಆದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ಕುರಿತಂತೆ ಮುಂದಿನ ವಿಚಾರಣೆವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಿತು. ಅಂತೆಯೇ, ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ‘ರಾಜ್ಯ ಆರೋಗ್ಯ ಇಲಾಖೆ 2025ರ ಜೂನ್ 12ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.