ADVERTISEMENT

ಕೆಪಿಎಸ್‌ಸಿ: ಉತ್ತರ ಪತ್ರಿಕೆ ಪಡೆಯಲು ಅಭ್ಯರ್ಥಿ ಅರ್ಹ

ಕರ್ನಾಟಕ ಮಾಹಿತಿ ಆಯೋಗದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 17:46 IST
Last Updated 29 ಆಗಸ್ಟ್ 2020, 17:46 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ‘ಕೆಪಿಎಸ್‌ಸಿ ಮೌಲ್ಯಮಾಪನ ಮಾಡಿರುವ ಉತ್ತರ ಪತ್ರಿಕೆಯ ಪ್ರತಿಯನ್ನುಮಾಹಿತಿ ಹಕ್ಕು ಕಾಯ್ದೆಯಡಿ ಪರೀಕ್ಷೆ ಬರೆದ ಅಭ್ಯರ್ಥಿಯು ಪಡೆಯಬಹುದು’ ಎಂದು ಹೈಕೋರ್ಟ್ ಆದೇಶಿಸಿದೆ.

ಆ ಮೂಲಕ ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಮಾಹಿತಿ ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಕೆಪಿಎಸ್‌ಸಿ ಅರ್ಜಿ ಸಲ್ಲಿಸಿತ್ತು. ‘ಅರ್ಜಿದಾರನು ತನ್ನದೇ ಉತ್ತರ ಪತ್ರಿಕೆ ಕೇಳಿದಾಗ ಅದನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳು ನಿರಾಕರಿಸುವಂತಿಲ್ಲ’ ಎಂದು ಹೇಳಿದೆ.

ADVERTISEMENT

2015ರ ಬ್ಯಾಚ್‌ನಲ್ಲಿ ಅಭ್ಯರ್ಥಿಯಾಗಿದ್ದ ಆರ್. ವಿನಯಕುಮಾರ್ ಎಂಬುವರು 2017ರ ಡಿಸೆಂಬರ್ 23ರಂದು ಮುಖ್ಯ ಪರೀಕ್ಷೆ ಬರೆದಿದ್ದರು. 2019ರ ಜನವರಿ 28ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ವಿನಯಕುಮಾರ್ ಆಯ್ಕೆಯಾಗಿರಲಿಲ್ಲ.ಆದ್ದರಿಂದ ಅವರು ಪ್ರತಿ ಮುಖ್ಯ ಲಿಖಿತ ಪರೀಕ್ಷೆಗಳಲ್ಲಿ ಪ್ರತಿ ಪ್ರಶ್ನೆಗೆ ನೀಡಲಾದ ಅಂಕಗಳ ಮಾಹಿತಿ ತಿಳಿದುಕೊಳ್ಳಲು ಉತ್ತರ ಪತ್ರಿಕೆ ಪ್ರತಿ ಕೇಳಿದ್ದರು.

ಆದರೆ, ಅಂಗೇಶ್‌ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶ ಉಲ್ಲೇಖಿಸಿ ಉತ್ತರ ಪತ್ರಿಕೆ ನೀಡಲು ಕೆಪಿಎಸ್‌ಸಿ ನಿರಾಕರಿಸಿತ್ತು. ವಿನಯಕುಮಾರ್ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

‘ಯುಪಿಎಸ್‌ಸಿ ಪರೀಕ್ಷೆ ಬರೆದ ಎಲ್ಲರ ಉತ್ತರ ಪತ್ರಿಕೆ ಪ್ರತಿಯನ್ನು ಅಂಗೇಶ್‌ಕುಮಾರ್ ಕೇಳಿದ್ದರು. ವಿನಯಕುಮಾರ್ ತಮ್ಮ ಉತ್ತರ ಪತ್ರಿಕೆ ಮಾತ್ರ ಕೇಳಿದ್ದಾರೆ. ಹೀಗಾಗಿ, ಅಂಗೇಶ್‌ಕುಮಾರ್ ಪ್ರಕರಣ ಇದಕ್ಕೆ ಅನ್ವಯಾಗುವುದಿಲ್ಲ. ಉತ್ತರ ಪತ್ರಿಕೆ ನೀಡಬೇಕು’ ಎಂದು ರಾಜ್ಯ ಮಾಹಿತಿ ಆಯುಕ್ತ ಎನ್.ಪಿ. ರಮೇಶ್ ಆದೇಶಿಸಿದ್ದರು.

ಈ ಆದೇಶ ಪ್ರಶ್ನಿಸಿ ಕೆಪಿಎಸ್‌ಸಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ವಿಚಾರಣೆ ನಡೆಸಿದರು. ‘ಉತ್ತರ ಪತ್ರಿಕೆ ಪ್ರತಿ ನೀಡುವುದರಿಂದ ಪಾರದರ್ಶಕತೆ ಖಚಿತವಾಗಲಿದೆ. ವಿನಯಕುಮಾರ್ ಕೇಳಿರುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಮಾಹಿತಿ ನೀಡುವಾಗ ಪರೀಕ್ಷಕರ ಗುರುತು ಪತ್ತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

‘ಪರೀಕ್ಷೆ ಬರೆದ ಅಭ್ಯರ್ಥಿಗೆ ತನ್ನ ಮಾಲ್ಯಮಾಪನ ಮಾಡಿದ ಉತ್ತರ ಪತ್ರಿಕೆ ನೀಡದಿರಲು ಯಾವುದೇ ಕಾರಣ ಕಾಣುತ್ತಿಲ್ಲ. ಹೀಗಾಗಿ ಅವರ ಕೇಳಿರುವ ಮಾಹಿತಿ ಒದಗಿಸಬೇಕು’ ಎಂದು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.