ADVERTISEMENT

ಡಿಕೆಶಿ ಇ.ಡಿ ವಿಚಾರಣೆ ಮುಂದೂಡಿಕೆ ಕೋರಿಕೆ ಪರಿಗಣಿಸಲು ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:05 IST
Last Updated 7 ಫೆಬ್ರುವರಿ 2019, 18:05 IST
   

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ‌) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಬೇಕಿರುವ ಸಚಿವ ಡಿ.ಕೆ.ಶಿವಕುಮಾರ್ ಒಂದು ವೇಳೆ ಕಾಲಾವಕಾಶ ಕೋರಿದರೆ ಅದನ್ನು ಪರಿಗಣಿಸಿ’ ಎಂದು ಹೈಕೋರ್ಟ್‌ ಇ.ಡಿಗೆ ನಿರ್ದೇಶಿಸಿದೆ.

‘ಇ.ಡಿ ನೀಡಿರುವ ಸಮನ್ಸ್‌ ರದ್ದುಗೊಳಿಸಬೇಕು’ ಎಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಶಿವಕುಮಾರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಅರ್ಜಿದಾರರು ಕಾಲಕಾಲಕ್ಕೆ ಕಾನೂನು ಬದ್ಧವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ಐ‌‌.ಟಿ ದಾಳಿ ನಡೆದ ಸಂದರ್ಭದಲ್ಲಿ ತೆರಿಗೆ ಪಾವತಿಸಲು ಇನ್ನೂ ಕಾಲಾವಕಾಶ ಇತ್ತು. ಆದ್ದರಿಂದ ಐ.ಟಿ ನೀಡಿರುವ ಸಮನ್ಸ್‌ಗೆ ತಡೆ ನೀಡಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ನ್ಯಾಯಮೂರ್ತಿಗಳು, ‘ಈಗ ತಡೆ ನೀಡಲು ಆಗುವುದಿಲ್ಲ. ಇದೇ 22ಕ್ಕೆ ಮುಂದಿನ ವಿಚಾರಣೆ ನಡೆಸಿ ಅಂದು, ತಡೆ ನೀಡಬೇಕೊ ಬೇಡವೊ ಎಂಬ ಬಗ್ಗೆ ಆದೇಶಿಸಲಾಗುವುದು’ ಎಂದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಅರ್ಜಿದಾರರು ಕಾಲಾವಕಾಶ ಕೋರಿದರೆ ಅದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಶಿವಕುಮಾರ್ ಅವರ ವ್ಯವಹಾರಗಳ ಪಾಲುದಾರ ಸಚಿನ್‌ ನಾರಾಯಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಭಾರತೀಯ ದಂಡ ಸಂಹಿತೆ ಕಲಂ 120 ಬಿ ಅಡಿಯಲ್ಲಿ ಇ.ಡಿ ವಿಚಾರಣೆಗೆ ಅನುಮತಿ ನೀಡುವ ಅಧಿಕಾರ ಹೊಂದಿಲ್ಲ’ ಎಂದು ಪ್ರತಿಪಾದಿಸಿದರು.

ಶಿವಕುಮಾರ್ ಅವರಿಗೆ ಸೇರಿದ ಮನೆಗಳ ಮೇಲಿನ ಐ.ಟಿ ದಾಳಿಗೆ ಸಂಬಂಧಿಸಿದಂತೆ ದೆಹಲಿಯ ಕರ್ನಾಟಕ ಭವನದ ನೌಕರ ಆಂಜನೇಯ ಹನುಮಂತಯ್ಯ, ಸುನಿಲ್‌ ಕುಮಾರ್ ಶರ್ಮ ಹಾಗೂ ಸಚಿನ್‌ ನಾರಾಯಣ ಅವರ ಅರ್ಜಿಗಳ ವಿಚಾರಣೆಯನ್ನು ಇದೇ 14ಕ್ಕೆ ಹಾಗೂ ಶಿವಕುಮಾರ್ ಅರ್ಜಿಯನ್ನು ಇದೇ 22ಕ್ಕೆ ಮುಂದೂಡಲಾಗಿದೆ. ಶಿವಕುಮಾರ್ ಅವರ ಆಪ್ತ ಸುನಿಲ್‌ ಕುಮಾರ್ ಶರ್ಮ ಅವರಿಗೆ ಅವರಿಗೆ ಸೇರಿದ ದೆಹಲಿ ಫ್ಲ್ಯಾಟ್‌ನಿಂದ ವಶಪಡಿಸಿಕೊಂಡ ₹ 6.68 ಕೋಟಿ ಮೊತ್ತಕ್ಕೆ ಸಂಬಂಧಿಸಿದಂತೆ ಇ.ಡಿ. ಶಿವಕುಮಾರ್ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದು ಶುಕ್ರವಾರ (ಫೆ.8) ಅವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.