
ಬೆಂಗಳೂರು: ‘ಶಾಸಕರಿಗೆ ಮಂಜೂರಾದ ಅನುದಾನ ಈವರೆಗೆ ಯಾಕೆ ಬಿಡುಗಡೆ ಆಗಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
‘ಆಡಳಿತ ಮತ್ತು ಪ್ರತಿಪಕ್ಷ ಶಾಸಕರ ನಡುವೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿ ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ನಿರ್ದಿಷ್ಟ ಅನುದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು 2026 ಜನವರಿ 21ಕ್ಕೆ ಮುಂದೂಡಿತು.
ಆಕ್ಷೇಪ: ‘ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ಗ್ರಾಮಗಳಿಗೆ 2019ರ ಜನವರಿ 23ರಂದು ₹5 ಕೋಟಿ ಹಾಗೂ ಪುರಸಭೆಗೆ ಹೊಸದಾಗಿ ಸೇರ್ಪಡೆಗೊಂಡ ವಾರ್ಡ್‌ಗಳ ಅಭಿವೃದ್ಧಿಗೆ ಜುಲೈ 20ರಂದು ₹10 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ’ ಎಂಬ ಅಂಶಕ್ಕೆ ಸೀಮಿತವಾಗಿ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಈ ನೋಟಿಸ್ ಜಾರಿಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.