ಕರ್ನಾಟಕ ಹೈಕೋರ್ಟ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲವು ವಾರ್ಡ್ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ಆಕ್ಷೇಪಿಸಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಜಿ.ಎ.ಮಿಥುನ್ ವಾದ ಆಲಿಸಿದ ನ್ಯಾಯಪೀಠ, ‘ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳಿಗೆ ಸೇರಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ಸರ್ಕಾರದ ವಕೀಲರಿಗೆ ನಿರ್ದೇಶಿಸಿತು.
ಅಂತೆಯೇ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ರಾಜ್ಯ ಚುನಾವಣಾ ಆಯೋಗ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ನ್ಯಾಯಪೀಠ ವಿಚಾರಣೆಯನ್ನು ಫೆಬ್ರುವರಿ 18ಕ್ಕೆ ಮುಂದೂಡಿತು.
ಆಕ್ಷೇಪ ಏನು?: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಳೇನಹಳ್ಳಿ ವಾರ್ಡ್‌ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳನ್ನು ಮತ್ತು ಕೊತ್ತನೂರು ವಾರ್ಡ್‌ನ ಕ್ಲಾಸಿಕ್ ಆರ್ಚರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇ ಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್‌ಗೆ ಸೇರ್ಪಡೆ ಮಾಡಿರುವುದನ್ನು ಆಕ್ಷೇಪಿಸಲಾಗಿದೆ.
‘ಒಂದು ವಾರ್ಡ್ ಅನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸುವುದು ಜಿಬಿಎ ಕಾಯ್ದೆ ಮತ್ತು ವಾರ್ಡ್ ಮರುವಿಂಗಡಣೆ ಮಾರ್ಗಸೂಚಿಗಳಿಗೆ ವಿರುದ್ಧ. ಆದ್ದರಿಂದ ಎಳೇನಹಳ್ಳಿ ವಾರ್ಡ್‌ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳನ್ನು ಮತ್ತು ಕೊತ್ತನೂರು ವಾರ್ಡ್‌ನ ಕ್ಲಾಸಿಕ್ ಆರ್ಚರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್‌ಗೆ ಸೇರ್ಪಡೆ ಮಾಡಿ ಹೊರಡಿಸಲಾಗಿರುವ ಅಧಿಸೂಚನೆ ರದ್ದುಪಡಿಸಬೇಕು. ಬೊಮ್ಮನಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಿಗೆ ಸೇರಿಸಿರುವ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳಿಗೆ ಮರು ಸೇರ್ಪಡೆ ಮಾಡಲು ಆದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.