ಬೆಂಗಳೂರು: ಸೇವಾವಧಿಯಲ್ಲಿ ಕಾನೂನು ಪದವಿ ಪಡೆದಿದ್ದ ಸರ್ಕಾರಿ ನೌಕರರೊಬ್ಬರು, ‘ಕಾನೂನು ಪದವಿ ತರಗತಿಗಳಿಗೆ ಹಾಜರಾಗಿರುವ ದಾಖಲೆಗಳನ್ನು ಹಾಜರುಪಡಿಸಿಲ್ಲ’ ಎಂಬ ಕಾರಣಕ್ಕೆ ಅವರ ವಕೀಲಿಕೆ ಸನ್ನದು ನೋಂದಣಿಗೆ ನಿರಾಕರಿಸಿ ಆದೇಶಿಸಿದ್ದ ರಾಜ್ಯ ವಕೀಲರ ಪರಿಷತ್ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ರಾಜ್ಯ ವಕೀಲರ ಪರಿಷತ್ ಕಾರ್ಯದರ್ಶಿ ಆದೇಶ ರದ್ದುಗೊಳಿಸುವಂತೆ ಕೋರಿ ಬೀದರ್‌ನ ಸಿವಿಲ್ ನ್ಯಾಯಾಲಯದ ನಿವೃತ್ತ ಸಹಾಯಕ ರಿಜಿಸ್ಟ್ರಾರ್ ಶೆಲ್ಹನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ‘ಅರ್ಜಿದಾರರರಿಂದ ನೋಂದಣಿಗೆ ಹೊಸದಾಗಿ ಅರ್ಜಿ ಪಡೆದು, ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ’ ಎಂದು ಪರಿಷತ್‌ಗೆ ನಿರ್ದೇಶಿಸಿದೆ.
‘ವಿಶ್ವವಿದ್ಯಾಲಯ ಅರ್ಜಿದಾರರಿಗೆ ತಾತ್ಕಾಲಿಕ ಪದವಿ ಹಾಗೂ ಘಟಿಕೋತ್ಸವ ಪ್ರಮಾಣ ಪತ್ರವನ್ನು ನೀಡಿರುವಾಗ, ಕಾನೂನು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂದು ಹೇಳಲಾಗದು’ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣವೇನು?: ಅರ್ಜಿದಾರರು ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು ಮತ್ತು ಸೇವಾವಧಿಯಲ್ಲಿ ಕಾನೂನು ಪದವಿ ಪೂರೈಸಿದ್ದರು. ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಘಟಿಕೋತ್ಸವ ಪ್ರಮಾಣಪತ್ರ ಪ್ರದಾನ ಮಾಡಲಾಗಿತ್ತು. 2018ರಲ್ಲಿ ನಿವೃತ್ತರಾದ ನಂತರ ವಕೀಲರಾಗಿ ನೋಂದಾಯಿಸಲು ರಾಜ್ಯ ವಕೀಲರ ಪರಿಷತ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪರಿಷತ್, ‘ಶೆಲ್ಹನ್ ಪದವಿ ಪ್ರಮಾಣಪತ್ರ ಪಡೆಯಲು ಅರ್ಹರಲ್ಲ’ ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು.
ಅರ್ಜಿದಾರರ ಪರ ವಕೀಲ ಎಚ್.ಎಲ್.ಪ್ರದೀಪ್ ಕುಮಾರ್, ರಾಜ್ಯ ವಕೀಲರ ಪರಿಷತ್ ಪರ ಜಿ.ನಟರಾಜ್ ಮತ್ತು ಭಾರತೀಯ ವಕೀಲರ ಪರಿಷತ್ ಪರವಾಗಿ ಶ್ರೀಧರ್ ಪ್ರಭು ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.