ADVERTISEMENT

ಹಣ ಪಡೆದು ಮತ ಚಲಾವಣೆ: ರಾಜ್ಯ ಹೈಕೋರ್ಟ್‌ ಬೇಸರ

ಜನರು ಸ್ವಾರ್ಥಿಗಳಾಗುತ್ತಿದ್ದಾರೆ, ನ್ಯಾಯಾಲಯಗಳು ಏನೂ ಮಾಡಲಾಗದು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 20:44 IST
Last Updated 6 ಏಪ್ರಿಲ್ 2023, 20:44 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜನರಿಗೆ ಬುದ್ಧಿ ಬಂದಿಲ್ಲ. ಹಣ ಪಡೆದು ಮತ ಹಾಕುವ ಚಾಳಿ ಮುಂದುವರಿಸಿದ್ದಾರೆ. ಜನ ಎಚ್ಚೆತ್ತುಕೊಳ್ಳದಿದ್ದರೆ ನಾವೇನೂ ಮಾಡುವುದಕ್ಕೆ ಸಾಧ್ಯವಿಲ್ಲ. ಜನ ಸರಿಯಾದರೆ ಎಲ್ಲವೂ ಸರಿಯಾಗಲಿದೆ’ ಎಂದು ಹೈಕೋರ್ಟ್‌, ಪ್ರಕರಣವೊಂದರ ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಸ್ಮಶಾನ ಭೂಮಿ ಇಲ್ಲದ ಗ್ರಾಮ, ಪಟ್ಟಣಗಳಲ್ಲಿ ಅಗತ್ಯವಾದ ಸ್ಮಶಾನ ಭೂಮಿ ಗುರುತಿಸಲು ಸರ್ಕಾರಕ್ಕೆ ನೀಡಿದ್ದ ನಿರ್ದೇಶನ ಜಾರಿಯಾಗದ ಕಾರಣ ಬೆಂಗಳೂರಿನ ಮೊಹಮ್ಮದ್ ಇಕ್ಬಾಲ್ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠವು ನಡೆಸಿತು.

ಗುರುವಾರ ವಿಚಾರಣೆಯ ವೇಳೆ ನ್ಯಾಯಮೂರ್ತಿ ವೀರಪ್ಪ, ‘ಸ್ಮಶಾನ ಭೂಮಿ ಇಲ್ಲದ ಕಡೆ ಗ್ರಾಮಸ್ಥರು ಮುಂದೆ ಬಂದು ಮನವಿ ಸಲ್ಲಿಸಲು ಕೋರಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಹಾಗಿದ್ದರೂ ಜನರು ಮುಂದೆ ಬಂದಿಲ್ಲ’ ಎಂದು ತೀವ್ರ ಬೇಸರ ಹೊರಹಾಕಿದರು. ‘ಜನ ಸ್ವಾರ್ಥಿಗಳಾಗುತ್ತಿದ್ದಾರೆ. ಹಣ ಪಡೆದು ಮತ ಹಾಕುತ್ತಿರುವಾಗ ನ್ಯಾಯಾಲಯಗಳು ಏನನ್ನೂ ಮಾಡಲಾಗದು’ ಪೀಠವು ಬೇಸರ
ವ್ಯಕ್ತಪಡಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.