ಹೈಕೋರ್ಟ್
ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸ್ವತಂತ್ರ ನ್ಯಾಯಾಂಗ) ತನಿಖೆಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ, ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್–ಕರ್ನಾಟಕ’ (ಪಿಯುಸಿಎಲ್) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಇ.ಶುಜಾಯುತ್ ಉಲ್ಲಾ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಧು ಭೂಷಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
‘ಪ್ರಕರಣದ ಸಮಗ್ರ ತನಿಖೆ ನಡೆಸಿ ಜೂನ್ 8ರೊಳಗೆ ವರದಿ ಸಲ್ಲಿಸಬೇಕು’ ಎಂದು ಆದೇಶಿಸಿರುವ ನ್ಯಾಯಪೀಠ, ‘ಮ್ಯಾಜಿಸ್ಟ್ರೇಟ್ ವರದಿಯಲ್ಲಿ, ಪೊಲೀಸರು ಅನುಸರಿಸಿದ ಕಾರ್ಯವಿಧಾನದಲ್ಲಿ ಏನಾದರೂ ಅಂತರ ಕಂಡುಬಂದರೆ, ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೆ ವಹಿಸಲಾಗುವುದು’ ಎಂಬ ಅಭಿಪ್ರಾಯವನ್ನು ಮೌಖಿಕವಾಗಿ ವ್ಯಕ್ತಪಡಿಸಿದೆ.
ಪ್ರಕರಣ: ರಿತೇಶ್ ಕುಮಾರ್, ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಆತನನ್ನು ಘಟನಾ ಸ್ಥಳಕ್ಕೆ ಮಹಜರು ಮಾಡಲು 2025ರ ಏಪ್ರಿಲ್ 13ರಂದು ಕರೆದೊಯ್ದಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಎಂಬ ಕಾರಣಕ್ಕೆ ಪೊಲೀಸರು ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ್ದರು.
ಅರ್ಜಿಯಲ್ಲಿ ಏನಿದೆ?: ’ಪೊಲೀಸರು ಸ್ವತಃ ನ್ಯಾಯಾಧೀಶರಾಗಿ, ಆರೋಪಿಗೆ ನ್ಯಾಯದಂಡನೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ, ಬಾಲಕಿ ಮತ್ತು ಎನ್‌ಕೌಂಟರ್‌ಗೆ ಗುರಿಯಾಗಿರುವ ವ್ಯಕ್ತಿಯ ಮೃತದೇಹಗಳನ್ನು ಸಂರಕ್ಷಿಸಿ ಇರಿಸಬೇಕು. ಶವಪರೀಕ್ಷೆಗಾಗಿ ದೆಹಲಿ ಅಥವಾ ಕರ್ನಾಟಕ ಹೊರತುಪಡಿಸಿದ ಅನ್ಯ ರಾಜ್ಯಗಳ ಶಸ್ತ್ರಚಿಕಿತ್ಸಕರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಒಳಗೊಂಡ ಸ್ವತಂತ್ರ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ಈ ತನಿಖಾ ತಂಡವು ಕೋರ್ಟ್ ನಿಗಾದಲ್ಲಿ ಕಾರ್ಯ ನಿರ್ವಹಿಸುವಂತೆ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.