ADVERTISEMENT

ವಂಚನೆ ಪ್ರಕರಣ | ಐಶ್ವರ್ಯಾ ಗೌಡ–ಹರೀಶ್‌ ಬಿಡುಗಡೆಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 16:29 IST
Last Updated 31 ಡಿಸೆಂಬರ್ 2024, 16:29 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಚಿನ್ನ ಪಡೆದು ವಂಚಿಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ.ಎನ್.ಹರೀಶ್‌ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಜೈಲಿನಲ್ಲಿರುವ ಉದ್ಯಮಿ ಐಶ್ವರ್ಯಾ ಗೌಡ (32) ಹಾಗೂ ಅವರ ಪತಿ ಕೆ.ಎನ್‌.ಹರೀಶ್‌ (45) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ಹಾಗೂ ಎಸ್‌.ಸುನಿಲ್‌ ಕುಮಾರ್ ಅವರು, ಐಶ್ವರ್ಯಾ ಗೌಡ ಹಾಗೂ ಹರೀಶ್‌ ಪರ ವಾದ ಮಂಡಿಸಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ನೋಟಿಸ್‌ ಅನುಸಾರ ಅರ್ಜಿದಾರರು ಸ್ವ ಇಚ್ಛೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕರಿಸಿದ್ದಾರೆ. ಆದರೆ, ಪೊಲೀಸರು ಏಕಾಏಕಿ ಅವರನ್ನು ಬಂಧಿಸಿರುವುದು ಕಾನೂನು ಬಾಹಿರ’ ಎಂದರು.

ADVERTISEMENT

‘ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಆರೋಪಿಗಳಿಗೆ ಪೊಲೀಸರು ಕಾನೂನುಬದ್ಧವಾಗಿ ನೀಡಬೇಕಾದ ಬಂಧನಕ್ಕೆ ಕಾರಣವಾಗುವ ಅಂಶಗಳನ್ನು ಲಿಖಿತ ರೂಪದಲ್ಲಿ ನೀಡಿಲ್ಲ. ಇದು ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ. ಆದ್ದರಿಂದ, ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಬಿಡುಗಡೆಗೆ ಆದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ದೂರುದಾರರಾದ ‘ವಾರಾಹಿ ವರ್ಲ್ಡ್ ಆಫ್ ಗೋಲ್ಡ್’ ಅಂಗಡಿ ಮಾಲಕಿ ವನಿತಾ ಎಸ್. ಐತಾಳ್ ಪರ ಹಾಜರಿದ್ದ ಹೈಕೋರ್ಟ್‌ ವಕೀಲ ಪಿ.ಅರವಿಂದ ಕಾಮತ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಇದೊಂದು ಬಹುಕೋಟಿ ಹಗರಣ. ಪೊಲೀಸರು ಆರೋಪಿಗಳನ್ನು ಬಂಧಿಸುವ ಪೂರ್ವ ಮತ್ತು ನಂತರ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಯಗಳನ್ನು ಅನುಸರಿಸಿದ್ದಾರೆ’ ಎಂದು ಪ್ರತಿಪಾದಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ‘ಅರ್ಜಿದಾರರ ಪರ ವಕೀಲರು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಬಗ್ಗೆ ವಾದ ಮಂಡಿಸಿದ್ದು ಬಿಡುಗಡೆಗೆ ಕೋರಿದ್ದಾರೆ. ಅಂತೆಯೇ, ಇದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕಿನ ರಕ್ಷಣೆ ವಿಷಯವೂ ಆಗಿದೆ. ಆದ್ದರಿಂದ, ಈ ಅರ್ಜಿಯನ್ನು ಈಗ ಮೆರಿಟ್‌ ಆಧಾರದಲ್ಲಿ ನಿರ್ಣಯಿಸುವುದಿಲ್ಲ‘ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. 

ಅಂತೆಯೇ, ‘ಅರ್ಜಿದಾರರು ಕಾಲಕಾಲಕ್ಕೆ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು’ ಎಂಬ ಷರತ್ತುಗಳೊಂದಿಗೆ ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿತು. ಅರ್ಜಿಯಲ್ಲಿ ಚಂದ್ರಾ ಲೇ ಔಟ್‌ ಠಾಣೆ ಇನ್‌ಸ್ಪೆಕ್ಟರ್‌ ಮತ್ತು ದೂರುದಾರೆ ವನಿತಾ ಐತಾಳ್‌ ಅವರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.