ADVERTISEMENT

ಮೈಶುಗರ್‌ | ರಾಜಕಾರಣಿ ನೇಮಕ ತರವಲ್ಲ: ಹೈಕೋರ್ಟ್‌ ಕಳವಳ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:49 IST
Last Updated 17 ನವೆಂಬರ್ 2025, 15:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸರ್ಕಾರಿ ಕಂಪನಿ ಅಥವಾ ಸಾರ್ವಜನಿಕ ವಲಯದ ಉದ್ಯಮಕ್ಕೆ ರಾಜಕಾರಣಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ತರವಲ್ಲ’ ಎಂದಿರುವ ಹೈಕೋರ್ಟ್‌, ‘ಇದು ಕಾರ್ಮಿಕರ ದುಃಖವನ್ನು ಹೆಚ್ಚಿಸುವುದಲ್ಲದೆ ಸಾರ್ವಜನಿಕ ಹಿತಾಸಕ್ತಿಗೆ ಹಾನಿ ಉಂಟು ಮಾಡುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದೆ.

ಪ್ರಕರಣವೊಂದರಲ್ಲಿ ಮಂಡ್ಯದ ನಾಗರಾಜಪ್ಪ (80) ಸಲ್ಲಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ, 2008 ರಿಂದ 2012ರವರೆಗೆ ಮೈಶುಗರ್‌ ಕಂಪನಿ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಅವರ ಅವಧಿಯಲ್ಲಿನ ₹127 ಕೋಟಿ ನಷ್ಟದ ಬಗ್ಗೆ ಉಪ ಲೋಕಾಯುಕ್ತ ತನಿಖೆಗೆ ಆದೇಶ ನೀಡಿರುವುದನ್ನು ರದ್ದುಗೊಳಿಸಲು ನಿರಾಕರಿಸಿದೆ.

‘ಏಷ್ಯಾದ ಅತಿದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ ಮೈಶುಗರ್‌ಗೆ ಅರ್ಜಿದಾರರನ್ನು ರಾಜಕೀಯ ಕಾರಣಗಳಿಗಾಗಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಸರ್ಕಾರದ ಕೆಟ್ಟ ನಿರ್ಧಾರ’ ಎಂದು ಹೇಳಿರುವ ನ್ಯಾಯಪೀಠ, ‘ಸರ್ಕಾರಿ ಕಂಪನಿ ಅಥವಾ ಸಾರ್ವಜನಿಕ ವಲಯದ ಉದ್ಯಮದ ಅಧ್ಯಕ್ಷ ಹುದ್ದೆಗೆ ಉತ್ತಮ ಜ್ಞಾನವುಳ್ಳ ಮತ್ತು ವೃತ್ತಿಪರ ಶ್ರೇಷ್ಠತೆ ಹೊಂದಿದ ಅರ್ಹ ವ್ಯಕ್ತಿಗಳನ್ನು ಮಾತ್ರವೇ ನೇಮಿಸಬೇಕು’ ಎಂದು ತಿಳಿಸಿದೆ.

ADVERTISEMENT

‘ಉಪ ಲೋಕಾಯುಕ್ತರು ಈಗಾಗಲೇ ನೀಡಿರುವ ವರದಿಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಮೈಶುಗರ್‌ ಅಧ್ಯಕ್ಷರಾಗಿ ಅರ್ಜಿದಾರರು ತೆಗೆದುಕೊಂಡ ನಿರ್ಧಾರಗಳಿಂದ ಉಂಟಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಅಥವಾ ವಸೂಲು ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಶಿಫಾರಸುಗಳನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.