ಬೆಂಗಳೂರು: ‘ಕ್ರಿಮಿನಲ್ ಪ್ರಕರಣದ ಮರು ತನಿಖೆ, ಹೊಸ ತನಿಖೆ ಅಥವಾ ತನಿಖೆಯನ್ನು ಯಾವುದೇ ಮತ್ತೊಂದು ಸಂಸ್ಥೆಗೆ ವರ್ಗಾಯಿಸುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಮಾತ್ರ ಇದೆಯೇ ಹೊರತಾಗಿ ವಿಚಾರಣಾ ನ್ಯಾಯಾಲಯಗಳಿಗೆ ಇಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕ್ರಿಮಿನಲ್ ಪ್ರಕರಣವೊಂದರಲ್ಲಿ ನಗರದ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿರುವ (ಎಸಿಜೆಎಂ) ಪ್ರಕರಣ ರದ್ದು ಕೋರಿ ನಗರದ 64 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವಿಚಾರಣಾ ನ್ಯಾಯಾಲಯ ತಾನು ನೀಡಿರುವ ಆದೇಶದಲ್ಲಿ ಕಾನೂನಿನ ಮೂಲತತ್ವವನ್ನೇ ನಿರ್ಲಕ್ಷಿಸಿದಂತೆ ಕಾಣುತ್ತಿದೆ’ ಎಂದು ಆಘಾತ ವ್ಯಕ್ತಪಡಿಸಿದೆ.
ವಿಚಾರಣಾ ನ್ಯಾಯಾಲಯ ಪೊಲೀಸರಿಗೆ ಕ್ರಿಮಿನಲ್ ಪ್ರಕರಣದ ‘ಮರು ಅಥವಾ ಹೆಚ್ಚಿನ’ ತನಿಖೆ ನಡೆಸುವಂತೆ ಆದೇಶಿಸಿರುವುದು ‘ವಿಚಿತ್ರವಾಗಿದೆ’ ಎಂದು ಬಣ್ಣಿಸಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯವು ‘ಮರು’ ಅಥವಾ ‘ಹೊಸ’ ತನಿಖೆ ಎಂಬ ಪದಗಳನ್ನು ಮುಕ್ತವಾಗಿ ಬಳಸುವ ಮೂಲಕ ಕ್ರಿಮಿನಲ್ ನ್ಯಾಯಶಾಸ್ತ್ರದಲ್ಲಿ ಅವುಗಳಿಗಿರುವ ಆಳವಾದ ವ್ಯತ್ಯಾಸವನ್ನೇ ಮರೆತುಬಿಟ್ಟಿದೆ’ ಎಂದು ಕುಟುಕಿದೆ.
‘ವಿಚಾರಣಾ ನ್ಯಾಯಾಲಯವು ಹೆಚ್ಚಿನ ತನಿಖೆಗೆ ಆದೇಶಿಸುವ ಅಧಿಕಾರವನ್ನು ಹೊಂದಿದ್ದರೂ, ನಿರ್ದಿಷ್ಟ ಪ್ರಕರಣದಲ್ಲಿ, ‘ಮುಂದಿನ ತನಿಖೆ’ ಎಂಬ ಪದವನ್ನು ಬಳಸುವಲ್ಲಿನ ಆದೇಶ ದೋಷಪೂರಿತವಾಗಿದೆ. ವಿಚಾರಣಾ ನ್ಯಾಯಾಲಯವು ತನಿಖಾ ವರದಿ, ದೋಷಾರೋಪ ಪಟ್ಟಿ ಅಥವಾ ಮುಕ್ತಾಯ ವರದಿ... ಇತ್ಯಾದಿಗಳನ್ನು ಪೊಲೀಸರು ಸಲ್ಲಿಸಿದಾಗ ಮಾತ್ರವೇ ಹೆಚ್ಚಿನ ತನಿಖೆಗೆ ಆದೇಶಿಸುವ ಪ್ರಶ್ನೆ ಉದ್ಭವಿಸುತ್ತದೆ’ ಎಂದು ತಿಳಿಯಪಡಿಸಿದೆ.
‘ಮರು ತನಿಖೆ, ಹೊಸ ತನಿಖೆ ಅಥವಾ ತನಿಖೆಯನ್ನು ಯಾವುದೇ ಇತರ ಸಂಸ್ಥೆಗೆ ವರ್ಗಾಯಿಸುವ ಅಧಿಕಾರ ಅಥವಾ ವಿಶೇಷ ಹಕ್ಕು, ಭಾರತದ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರವೇ ಇದೆ. ಅಂತೆಯೇ, ಇದು ಸಿಆರ್‌ಪಿಸಿ ಕಲಂ 482ರ ಅಡಿಯಲ್ಲಿ ಸಾಂವಿಧಾನಿಕ ನ್ಯಾಯಾಲಯದ ಅಂತರ್ಗತ ನ್ಯಾಯವ್ಯಾಪ್ತಿಯೂ ಆಗಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣವನ್ನು ಪುನಃ ವಿಚಾರಣಾ ನ್ಯಾಯಾಲಯಕ್ಕೆ ವಾಪಸು ಕಳಿಸಿರುವ ನ್ಯಾಯಪೀಠ, ‘ಕಾನೂನು ಚೌಕಟ್ಟುಗಳ ವ್ಯಾಪ್ತಿಯಲ್ಲಿ ತಕ್ಕುದಾದ ತೀರ್ಮಾನ ಕೈಗೊಳ್ಳಿ’ ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.
ನಗರದ 31ನೇ ಎಸಿಜೆಎಂ ಕೋರ್ಟ್ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ-1973 (ಸಿಆರ್‌ಪಿಸಿ) ಕಲಂ 156(3)ರ ಅಡಿಯಲ್ಲಿ 'ಮರು' ಅಥವಾ 'ಮುಂದಿನ' ತನಿಖೆಗೆ ಉಲ್ಲೇಖಿಸಿರುವ ಆದೇಶ ಮೇಲ್ನೋಟಕ್ಕೇ ಕಾನೂನು ಬಾಹಿರವಾಗಿದೆ.– ನ್ಯಾ.ಎಂ.ನಾಗಪ್ರಸನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.