ADVERTISEMENT

ಸಂಪುಟ ದರ್ಜೆ ಸ್ಥಾನ: ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 21:50 IST
Last Updated 17 ಫೆಬ್ರುವರಿ 2026, 21:50 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘48 ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಸಂಪುಟ ದರ್ಜೆಯ ಸ್ಥಾನ ನೀಡಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದು ಆಕ್ಷೇಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ, ಸೂರಿ ಪಾಯಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಅರ್ಜಿದಾರರು ಪ್ರಸ್ತಾಪ ಮಾಡಿರುವ ವಿಷಯದ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 4 ಮುಂದೂಡಿತು.

ADVERTISEMENT

ಕೋರಿಕೆ: ‘ಈ ನೇಮಕಾತಿ ಸಂವಿಧಾನದ 102 ಮತ್ತು 192ನೇ ವಿಧಿಗೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ–1951ಕ್ಕೆ ವಿರುದ್ಧವಾಗಿದೆ. ಅಂತೆಯೇ, ಸುಪ್ರೀಂ ಕೋರ್ಟ್‌ನ ಮಾನದಂಡಗಳಿಗೂ ವ್ಯತಿರಿಕ್ತವಾಗಿದೆ. ಲಾಭದಾಯಕ ಹುದ್ದೆಗಳಲ್ಲಿರುವ ಈ ನೇಮಕಾತಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ನೇಮಕಗೊಂಡಿರುವವರನ್ನು ತಕ್ಷಣವೇ ಆಯಾ ಸ್ಥಾನಗಳಿಂದ ತೆಗೆದುಹಾಕಬೇಕು. ಅವರಿಗೆ ನೀಡಿರುವ ಎಲ್ಲ ಸೌಲಭ್ಯಗಳನ್ನೂ ಹಿಂಪಡೆಯಲು ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.