ಬೆಂಗಳೂರು: ಪೇಜಾವರ ಶ್ರೀಗಳು ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
‘ನನ್ನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್, ತನಿಖೆ ಮತ್ತು 37ನೇ ಎಸಿಸಿಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಗಂಗರಾಜು ಅಲಿಯಾಸ್ ಹಂಸಲೇಖ ಸಲ್ಲಿಸಿರುವ ರಿಟ್ ಅರ್ಜಿಯನ್ನುನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದಬಸವನಗುಡಿ ಪೊಲೀಸ್ ಠಾಣೆ ಅಧಿಕಾರಿ, ಡಾ.ಮುರಳೀಧರ ಹಾಗೂ ಎಸ್.ಎನ್.ರವೀಂದ್ರ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸಿ.ಎಸ್. ದ್ವಾರಕನಾಥ್, ‘ಹಂಸಲೇಖ ವಿರುದ್ಧದ ಆರೋಪಗಳಲ್ಲಿ ಪರಿಗಣಿಸಬಹುದಾದ ಸಂಜ್ಞೇಯ ಅಪರಾಧ ಕೃತ್ಯಗಳಿಲ್ಲ. ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿದರೆ ಅವರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.
‘ಅರ್ಜಿದಾರರು ಉದ್ದೇಶಪೂರ್ವಕವಾಗಿ ಎರಡು ವರ್ಗಗಳ ನಡುವೆ ದ್ವೇಷಭಾವನೆ ಉಂಟು ಮಾಡುವ, ಶಾಂತಿ ಕೆಡಿಸುವ ಅಥವಾ ಅವಹೇಳನಕಾರಿ ಹೇಳಿಕೆ ನೀಡುವ ಕೃತ್ಯ ಮಾಡಿಲ್ಲ.ಆದ್ದರಿಂದ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿದರು.
ಏನಿದು ಪ್ರಕರಣ?:ಮೈಸೂರಿನಲ್ಲಿ 2021ರ ನವೆಂಬರ್ 13ರಂದು ನಡೆದ ಕಾರ್ಯಕ್ರಮದಲ್ಲಿ ಹಂಸಲೇಖ ಅವರು, ಪೇಜಾವರ ಶ್ರೀಗಳು ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಕುರಿತಂತೆ ನೀಡಿದ್ದ ಹೇಳಿಕೆಗೆ ಟೀಕೆಗೆ ಕಾರಣವಾಗಿತ್ತು.
ಈ ಸಂಬಂಧ ಬೆಂಗಳೂರಿನ ಡಾ.ಮುರಳೀಧರ ಮತ್ತು ಎಸ್.ಎನ್. ಅರವಿಂದ ಅವರು ನೀಡಿದ ದೂರಿನ ಮೇರೆಗೆ ಬಸವನಗುಡಿ ಠಾಣಾ ಪೊಲೀಸರು ಹಂಸಲೇಖ ವಿರುದ್ಧ ನವೆಂಬರ್ 17ರಂದು ಎರಡು ಎಫ್‌ಐಆರ್ ದಾಖಲಿಸಿದ್ದರು. ಅಂತೆಯೇ, ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಹಂಸಲೇಖ, ನವೆಂಬರ್ 25ರಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಹಂಸಲೇಖ ಪರ ನಿಂತಿದ್ದ ವಿವಿಧ ಸಂಘಟನೆಗಳು, ಪ್ರಗತಿಪರರು ಅವರ ಹೇಳಿಕೆಯನ್ನು ಸಮರ್ಥಿಸಿದ್ದಲ್ಲದೇ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಬೆಂಬಲ ನೀಡಿದ್ದರು. ಹಂಸಲೇಖ ಹೇಳಿಕೆ ಪರ–ವಿರೋಧ ಚರ್ಚೆಗೂ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.