ADVERTISEMENT

ಕಲಬುರಗಿ ಡಿಸಿಗೆ ಅವಹೇಳನ | ತನಿಖೆಗೆ ಸಹಕರಿಸಿ: ರವಿಕುಮಾರ್‌ಗೆ ಹೈಕೋರ್ಟ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:37 IST
Last Updated 29 ಮೇ 2025, 14:37 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ತನಿಖೆಗೆ ಸಹಕರಿಸಿ’ ಎಂದು ಆರೋಪಿಯಾದ ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ಗೆ ಹೈಕೋರ್ಟ್‌ ತಾಕೀತು ಮಾಡಿದೆ.

‘ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿಜೆಪಿ ಶಾಸಕ ಎನ್.ರವಿಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರು ಗುರುವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಆರೋಪಿಯು ತನಿಖೆಗೆ ಸಹಕರಿಸುವುದಾದರೆ ಬಂಧಿಸುವುದಿಲ್ಲ’ ಎಂದು ಮೌಖಿಕ ಭರವಸೆ ನೀಡಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಆರೋಪಿಯು ಒಂದು ವೇಳೆ ಕ್ಷಮಾಪಣೆ ಕೇಳಿದರೆ ಅದನ್ನು ಪ್ರಮಾಣಪತ್ರದ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಂ. ವಿನೋದ್‌ ಕುಮಾರ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಜೂನ್‌ 19ಕ್ಕೆ ಮುಂದೂಡಿತು.

ರವಿಕುಮಾರ್ ವಿರುದ್ಧ ಇದೇ 26ರಂದು ಎಫ್‌ಐಆರ್‌ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 197, 224, 299, 302, 351,353 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾ‌ಯ್ದೆ–1989ರ ಕಲಂ 31(1)(ಆರ್‌)ರ ಅಪರಾಧಗಳಡಿ ಕಲಬುರಗಿ ಜಿಲ್ಲಾ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ ನ್ಯಾಯಿಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 

ನೋಟಿಸ್‌ ಜಾರಿ
ಕಲಬುರಗಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಆರೋಪಿಯಾದ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ಗೆ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಾತಿ ನಿಂದನೆ ಮಾಡಿ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರು ಆಗುವಂತೆ ಎರಡು ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಗೈರಾಗಿದ್ದರಿಂದ ಮತ್ತೊಂದು ನೋಟಿಸ್ ಹೊರಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.