ADVERTISEMENT

ಬಂದೂಕು ಇಟ್ಟುಕೊಳ್ಳಲು ಕೊಡವರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 21:53 IST
Last Updated 22 ಸೆಪ್ಟೆಂಬರ್ 2021, 21:53 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೊಡವ ಸಮುದಾಯ ಮತ್ತು ಜಮ್ಮಾ ಹಿಡುವಳಿದಾರರು ಬಂದೂಕು ಇಟ್ಟುಕೊಳ್ಳಲು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳಿಗೆ ವಿನಾಯಿತಿ ನೀಡಿ 2019ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಈ ವಿನಾಯಿತಿ ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚೇತನ್ ವೈ.ಕೆ. ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

‘ಸ್ವಾತಂತ್ರ್ಯ ಪೂರ್ವದಿಂದ ಈ ವಿನಾಯಿತಿ ನೀಡಲಾಗಿದೆ. ಕೆಲ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟುಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ವಿನಾಯಿತಿ ಲಭ್ಯವಾಗಿದೆ. ಆದ್ದರಿಂದ, ಅಧಿಸೂಚನೆಯು ಸಾಂವಿಧಾನಿಕ ಸಿಂಧುತ್ವ ಹೊಂದಿದೆ’ ಎಂದು ‌ಪೀಠ ಹೇಳಿತು.

ADVERTISEMENT

ಕೊಡವ ಸಮಾಜದ ಪರ ಹಾಜರಾಗಿದ್ದ ವಕೀಲ ಸಜನ್ ಪೂವಯ್ಯ, ‘ಕೊಡವರದ್ದು ಜಾತಿ ರಹಿತವಾದ ವಿಶೇಷ ಸಮುದಾಯ. ಬಂದೂಕು, ಒಡಿಕತ್ತಿ ಮತ್ತು ಪೀಚೆಕತ್ತಿ ಕೊಡವರ ಜೀವನದ ಭಾಗವಾಗಿದ್ದು, ಸಿಖ್‌ ಸಮುದಾಯದವರಿಗೆ ಕಿರ್ಪಾನ್‌ (ಸಣ್ಣ ಚೂರಿ) ಇದ್ದಂತೆ’ ಎಂದು ವಾದಿಸಿದರು.‌

‘ಕೊಡವ ಜನಾಂಗ’ ಎಂಬ ಪದದ ವರ್ಗೀಕರಣ ಮತ್ತು ಬಳಕೆಯು ಕೊಡಗಿನ ನಾಗರಿಕರ ನಡುವೆ ಜಾತಿ ತಾರತಮ್ಯವನ್ನು ಉತ್ತೇಜಿಸುತ್ತದೆ. ಅಲ್ಲದೇ ಇದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆ. ಸಂಪ್ರದಾಯ ಮತ್ತು ಸಂಸ್ಕೃತಿ ಆಧಾರದಲ್ಲಿ ವಿನಾಯಿತಿ ನೀಡಲಾಗದು’ ಎಂದು ಅರ್ಜಿದಾರರು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.