ADVERTISEMENT

ಅಪರಾಧಿಕ ನ್ಯಾಯಶಾಸ್ತ್ರ ದಿಕ್ಕು ತಪ್ಪಿ ಹೋದೀತು: ಹೈಕೋರ್ಟ್‌

ಎಸ್‌ಬಿಐ ಬ್ಯಾಂಕ್‌ ಸಾಲ: ಮರುಪಾವತಿ ವಿಳಂಬ ಆರೋಪದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:37 IST
Last Updated 5 ಫೆಬ್ರುವರಿ 2026, 15:37 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸಾಲದ ಮೊತ್ತ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಗ್ರಾಹಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾ ಹೋದರೆ ನಮ್ಮ ಅಪರಾಧಿಕ ನ್ಯಾಯಶಾಸ್ತ್ರ ನಿಶ್ಚಿತವಾಗಿ ದುರುಪಯೋಗವಾಗುತ್ತದೆ’ ಎಂದು ಹೈಕೋರ್ಟ್‌, ಪ್ರಾಸಿಕ್ಯೂಷನ್‌ ನಡೆಗೆ ಅತೀವ ಕಳವಳ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಮಂಗಳೂರು ತಾಲ್ಲೂಕಿನ ಕಂಕನಾಡಿಯ ಉದ್ಯಮಿ ಮೊಹಮದ್ ರಫಾನ್‌ (38) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ ಪ್ರಾಸಿಕ್ಯೂಷನ್‌ ಅನ್ನು ಉದ್ದೇಶಿಸಿ, ‘ಮೂರು ತಿಂಗಳ ಸಾಲ ತುಂಬಲಿಲ್ಲ ಎಂದು ನಾಲ್ಕನೇ ತಿಂಗಳಿಗೆ ಸಾಲ ಪಡೆದ ಗ್ರಾಹಕನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾ ಹೋದರೆ ಗತಿಯೇನು’ ಎಂದು ಪ್ರಶ್ನಿಸಿತು.

ADVERTISEMENT

’ಅರ್ಜಿದಾರರು ತಾವು ಪಡೆದ ಸಾಲಕ್ಕೆ ಪ್ರತಿಯಾಗಿ ಈಗಾಗಲೇ ಸಾಕಷ್ಟು ಮೊತ್ತವನ್ನು ಮರುಪಾವತಿ ಮಾಡಿದ್ದಾರೆ. ಮೂರು ತಿಂಗಳಿನಿಂದ ಮರಪಾವತಿ ಮಾಡಿಲ್ಲ ಎಂದು ನಾಲ್ಕನೇ ತಿಂಗಳಿನಲ್ಲೇ ಕ್ರಿಮಿನಲ್‌ ಪ್ರಕರಣ ಹೂಡಿದರೆ ಅಪರಾಧಿಕ ನ್ಯಾಯ ಜನಸಾಮಾನ್ಯರನ್ನು ಸುಲಿದುಬಿಡುತ್ತದೆಯಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿತು.

ಇದಕ್ಕೆ ಪ್ರತಿಯಾಗಿ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌, ‘ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಸೀಮಿತವಾಗಿದೆಯಾದರೂ, ಇದರಲ್ಲಿ ಸಾರ್ವಜನಿಕರ ಹಣ ಇದೆ ಎಂಬ ಕಾರಣಕ್ಕೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ, ತನಿಖೆಗೆ ತಡೆ ನೀಡಬಾರದು’ ಎಂದು ಕೋರಿದರು.

ಈ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಪೀಠ, ‘ಅರ್ಜಿದಾರರು ಮೂರು ತಿಂಗಳಿನಿಂದ ಸಾಲ ತುಂಬಿಲ್ಲ ಎಂಬುದನ್ನು ಬಿಟ್ಟರೆ ಅವರ ವಿರುದ್ಧ ಬೇರೆ ಯಾವ ಆಪಾದನೆ ಇದೆ. ಅಷ್ಟೊಂದು ತರದೂದು ಇದ್ದರೆ ಸರ್‌ಫೇಸಿ (ಹಣಕಾಸು ಸ್ವತ್ತುಗಳ ಭದ್ರತೆ, ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ) ಕಾಯ್ದೆಯಡಿ ಕ್ರಮಕ್ಕೆ ಮುಂದಾಗಬಹುದಿತ್ತಲ್ಲವೇ? ಈ ರೀತಿ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾ ಹೋದರೆ ಇದಕ್ಕೆಲ್ಲಾ ಕೊನೆ ಎಲ್ಲಿದೆ? ಇಂತಹ ವ್ಯವಸ್ಥೆ ಶ್ರೀಸಾಮಾನ್ಯರನ್ನು ಹರಿದು ಮುಕ್ಕಿಬಿಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿತು. ಅಂತೆಯೇ, ಪ್ರಕರಣದ ತನಿಖೆಗೆ ತಡೆ ನೀಡಿ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.  

ಕೋರಿಕೆ ಏನು?: ಮಂಗಳೂರು ಪೂರ್ವ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 316(2), 316(5), 318(2), 318(3) ಮತ್ತು 3(5)ರ ಅಡಿಯಲ್ಲಿ ಅರ್ಜಿದಾರರನ್ನು 15ನೇ ಆರೋಪಿಯನ್ನಾಗಿಸಿ ದೂರು ದಾಖಲಿಸಿಕೊಂಡಿದ್ದಾರೆ. ‘ಈ ದೂರು ಮತ್ತು ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 6ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.