ಹೈಕೋರ್ಟ್
ಬೆಂಗಳೂರು: ಚಿಂತಾಮಣಿ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಕೊಲೆ ಯತ್ನ ಪ್ರಕರಣದ ಮೊದಲ ಆರೋಪಿ ಡಿ.ನರೇನ್ ಕುಮಾರ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಈ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಡಿ.ನರೇನ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದ್ದಾರೆ.
‘₹2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ತಿರುಚಲು ಪ್ರಯತ್ನಿಸಬಾರದು’ ಎಂಬುದೂ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ಪ್ರಕರಣವೇನು?: ಚಿಂತಾಮಣಿಯ ಗಜಾನನ ಸರ್ಕಲ್ ಬಳಿ 2023ರ ಅಕ್ಟೋಬರ್ 13ರಂದು ಸಂಜೆ 6.15ರ ವೇಳೆಯಲ್ಲಿ ಅಪರಿಚಿತರ ಗುಂಪೊಂದು ಅಗ್ರಹಾರ ಮುರಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿತ್ತು. ಸ್ಥಳೀಯರು ಮುರಳಿ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
‘ನಾಲ್ಕನೇ ಆರೋಪಿ ಮತ್ತು ಅಗ್ರಹಾರ ಮುರಳಿ ಮಧ್ಯೆ ವೈಯಕ್ತಿಕ ದ್ವೇಷವಿತ್ತು. ಆತನ ಪ್ರಚೋದನೆ ಮೇರೆಗೆ ಮುರಳಿ ಕೊಲೆಗೆ ಅರ್ಜಿದಾರ ಯತ್ನಿಸಿದ್ದ’ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಪೊಲೀಸರು ಅರ್ಜಿದಾರನನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.