ವಿಧಾನಮಂಡಳದ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಲು ಬಂದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಇದ್ದಾರೆ.
ಪ್ರಜಾವಾಣಿ ಚಿತ್ರ
ಬೆಂಗಳೂರು: ಸೋಮವಾರ ಆರಂಭವಾದ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಭಾಷಣದ ಪ್ರಮುಖ ಅಂಶಗಳು...
194 ಹೈಟೆಕ್ ಹಾರ್ವೆಸ್ಟ್ ಹಬ್‌ಗಳು ಸ್ಥಾಪನೆ ಆಗುತ್ತಿವೆ. ಹಾರ್ವೆಸ್ಟರ್‌ಗಳನ್ನು ಪಡೆಯುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ ಶೇ 50ರಷ್ಟು ಮತ್ತು ಇತರ ಸಮುದಾಯಗಳ ರೈತರಿಗೆ ಶೇ 40ರಷ್ಟು ಸಹಾಯಧನ ವಿತರಣೆ
ಈ ಸಾಲಿನಲ್ಲಿ 19166 ಹೆಕ್ಟೇರ್ ಪ್ರದೇಶವನ್ನು ತೋಟಗಾರಿಕೆ ಬೆಳೆಗಳ ವ್ಯಾಪ್ತಿಗೆ ತರಲಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಬೀಜದಿಂದ ಮಾರುಕಟ್ಟೆವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಒದಗಿಸಲು ‘ತೋಟಗಾರಿಕೆ ಮಾಲ್’ಗಳನ್ನು ಸ್ಥಾಪಿಸಲಾಗುವುದು
ಇದೇ ಜನವರಿ ಅಂತ್ಯಕ್ಕೆ 20.22 ಲಕ್ಷ ರೈತರಿಗೆ ₹16942 ಕೋಟಿ ಬೆಳೆ ಸಾಲ ಮತ್ತು 46000 ರೈತರಿಗೆ ₹1442 ಕೋಟಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಿಸಲಾಗಿದೆ. ಈ ವರ್ಷ ಸಹಕಾರ ಸಂಘಗಳಿಗೆ ಬಡ್ಡಿ ಸಹಾಯಧನ ನೀಡಲು ₹1451 ಕೋಟಿ ಒದಗಿಸಲಾಗಿದೆ.
ಧರ್ಮಸ್ಥಳ ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಗುರುತಿಸುವ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಇನ್ ವೈಯರ್ಡ್ ಅಂಡ್ ವಯರ್‌ಲೆಸ್ ಟೆಕ್ನಾಲಜಿ ಅನ್ನು 5 ವರ್ಷಗಳ ಅವಧಿಗೆ ₹25 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ.
ಮೈಸೂರಿನ ಮಂಡಕಳ್ಳಿಯಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ₹30 ಕೋಟಿ ವೆಚ್ಚದಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ಆರಂಭಿಸಲಾಗುವುದು.
ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅಡಿ 10.8 ಲಕ್ಷ ಪಿಯುಸಿ ವಿದ್ಯಾರ್ಥಿಗಳನ್ನುಪರೀಕ್ಷೆ ಮಾಡಿದಾಗ ಶೇ 32.5ರಷ್ಟು ಮಕ್ಕಳಲ್ಲಿ ಅನೀಮಿಯ ಇರುವುದು ಕಂಡು ಬಂದಿತ್ತು. ಇವರಿಗೆ ರಕ್ತ ವೃದ್ಧಿ ಚಿಕಿತ್ಸೆ ನೀಡಿದ್ದರಿಂದ ಶೇ 60ರಷ್ಟು ಮಕ್ಕಳು ಗುಣಮುಖರಾಗಿದ್ದಾರೆ.
ಕಳೆದ 19 ತಿಂಗಳಲ್ಲಿ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಆದರೆ ಇಡೀ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.