ADVERTISEMENT

ಶಾಲಾ–ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ: ಸರ್ಕಾರದ ನಿಲುವಿಗೆ ಹೈಕೋರ್ಟ್ ಬಲ

‘ಹಿಜಾಬ್‌ ಹಿಂದೆ ಕಾಣದ ಕೈ’

ಬಿ.ಎಸ್.ಷಣ್ಮುಖಪ್ಪ
Published 15 ಮಾರ್ಚ್ 2022, 20:23 IST
Last Updated 15 ಮಾರ್ಚ್ 2022, 20:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲಾ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್‌, ‘ಈ ವಿಷಯವನ್ನು ದೇಶ ದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಬಲವಾದ ಸಂಶಯ ವ್ಯಕ್ತಪಡಿಸಿದೆ.

ಈ ಕುರಿತಂತೆ ಕಾಯ್ದಿರಿಸಲಾಗಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಅವರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಮಂಗಳವಾರ ಬೆಳಗ್ಗೆ 10.35ಕ್ಕೆ ಪ್ರಕಟಿಸಿತು.

‘ಹಿಜಾಬ್ ಇಸ್ಲಾಂನ ಅತ್ಯಾವಶ್ಯಕ ಧಾರ್ಮಿಕ ಆಚರಣೆ (ಇಆರ್‌ಪಿ–ಎಸೆನ್ಶಿಯಲ್‌ ರಿಲಿಜಿಯಸ್ ಪ್ರ್ಯಾಕ್ಟೀಸ್‌) ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಅಂತೆಯೇ ಇಸ್ಲಾಂ ಧರ್ಮದ ಅನುಸಾರ ಹಿಜಾಬ್ ಅತ್ಯಾವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಯಾವುದೇ ಅಧಿಕೃತ ಕುರಾನಿನಲ್ಲಿ ಆಧಾರವಿಲ್ಲ’ ಎಂದು ನ್ಯಾಯಪೀಠದ ಮೂವರೂ ಸದಸ್ಯರು ಸಂಪೂರ್ಣ ಸಹಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸರ್ಕಾರ ಸಮವಸ್ತ್ರ ಸಂಹಿತೆ ಕುರಿತಂತೆ 2022ರ ಫೆ.5ರಂದು ಸುತ್ತೋಲೆ ಹೊರಡಿಸುವುದಕ್ಕೂ ಮುನ್ನವೇ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್‌ ಮೆಟ್ಟಿ ಲೇರಿ ಹಿಜಾಬ್‌ ಧರಿಸಲುಅವಕಾಶ ನೀಡಬೇಕು ಎಂದು ಕೋರಿದ್ದರು.ಇದನ್ನು ಗಮನಿಸಿದಾಗ, 2021ರ ಡಿಸೆಂಬರ್‌ ಮೊದಲ ವಾರದಲ್ಲೇ ಈ ಕಾಲೇಜಿನಲ್ಲಿ ಹಿಜಾಬ್‌ ಕುರಿತಂತೆ ಹುನ್ನಾರ ರೂಪಿಸುವ ಪ್ರಯತ್ನ ನಡೆದಿದೆ’ ಎಂದು ತೀರ್ಪು ಉಲ್ಲೇಖಿಸಿದೆ.

‘ಬೇರೆ ಯಾವುದೇ ವಿದ್ಯಾರ್ಥಿನಿಯರು ಹಿಜಾಬ್‌ ಕುರಿತಂತೆ ಪ್ರಸ್ತಾಪ ಮಾಡದಿದ್ದ ಸನ್ನಿವೇಶದಲ್ಲಿ ಅರ್ಜಿದಾರ ವಿದ್ಯಾರ್ಥಿನಿಯರು ಮಾತ್ರವೇ ಈ ಕುರಿತಂತೆ ವಿವಾದ ಎಬ್ಬಿಸಲು ಮುಂದಾಗಿರುವುದು ಸಂಶಯಕ್ಕೆ ಆಸ್ಪದ ನೀಡಿದೆ. ಈ ಸಂಶಯದ ಹಿಂದೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಜಮಾತೆ ಇಸ್ಲಾಂನಂತಹ ಸಂಘಟನೆಗಳ ಕೈವಾಡ ಕಂಡು ಬರುತ್ತಿದೆ. ಈ ಸಂಘಟನೆಯ ಮುಖ್ಯಸ್ಥರು ಅರ್ಜಿದಾರ ವಿದ್ಯಾರ್ಥಿನಿ ಯರ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿ ದಾಂದಲೆ ಎಬ್ಬಿಸಿರುವು ದನ್ನು ಗಮನಿಸಿದರೆ ಇಲ್ಲೇನೊ ಮಸ ಲತ್ತು ನಡೆಯುತ್ತಿದೆ ಎಂಬ ಮತ್ತೊಂದು ಅರ್ಜಿಯ ಅರ್ಜಿದಾರರ ವಾದಕ್ಕೆ ಪುಷ್ಟಿ ದೊರೆಯುವಂತಿದೆ. ಆದರೂ, ಈ ಸಂಬಂಧ ಪೊಲೀಸ್‌ ತನಿಖೆ ನಡೆಯುತ್ತಿರುವ ಕಾರಣ ಈ ವಿಷಯದಲ್ಲಿ ನ್ಯಾಯಪೀಠ ಸಂಯಮ ಕಾಯ್ದುಕೊಂಡು ಹೋಗಲು ಬಯಸುತ್ತದೆ‘ ಎಂದು ವಿವರಿಸಲಾಗಿದೆ.

ಕುರಾನ್‌ನಲ್ಲೇ ಇಲ್ಲ: ‘ಕುರಾನ್‌ನಲ್ಲಿ ಅನೇಕ ಪ್ರಕಾರದ ವ್ಯಾಖ್ಯಾನಗಳಿದ್ದು, ಯಾವ ಕುರಾನ್‌ ಅನ್ನು ಒಪ್ಪಬೇಕು ಎಂಬ ಪ್ರಶ್ನೆ ಎದುರಾಯಿತು. ಕಡೆಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಶಾಬಾನು ಪ್ರಕರಣ, ಶಾಯಿರಾಬಾನು ಪ್ರಕರಣ ಹಾಗೂ ಸಿದ್ದಿಖಿ ಪ್ರಕರಣಗಳಲ್ಲಿ ಅಬ್ದುಲ್ಲಾ ಯೂಸುಫ್‌ ಅಲಿ ಅವರು ಇಂಗ್ಲಿಷ್‌ಗೆ ಭಾಷಾಂತರ ಮಾಡಿರುವ ಕುರಾನ್‌ನ ಅಧಿಕೃತತೆಯನ್ನು ಅವಲಂಬಿಸಿ ತೀರ್ಪು ನೀಡಿದ್ದನ್ನೇ ಇಲ್ಲೂ ಪರಿಗಣಿಸಿದ್ದೇವೆ. ಇದರ ಅನುಸಾರ ಅಬ್ದುಲ್ಲಾ ಯೂಸುಫ್‌ ಅಲಿ ಅವರ ಭಾಷಾಂತರ ಮಾಡಿರುವ ಕುರಾನ್‌ನಲ್ಲಿ ಎಲ್ಲೂ ಕೂಡಾ ಹಿಜಾಬ್‌ ಪ್ರಸ್ತಾಪವೇ ಇಲ್ಲ’ ಎಂಬ ಅಂಶವನ್ನು ನ್ಯಾಯಪೀಠ ಎತ್ತಿ ತೋರಿಸಿದೆ.

‘ಸಮವಸ್ತ್ರದ ಕಟ್ಟಳೆ ವಿಧಾನದ ಮೂಲಕ ಹಿಜಾಬ್‌ ನಿರ್ಬಂಧಿಸಿರುವುದು ಅರ್ಜಿದಾರರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಖಾಸಗೀತನದ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ’ ಎಂಬ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ‘ಮೇಲು–ಕೀಳು, ಬಡವ–ಶ್ರೀಮಂತ ಎಂಬ ತರತಮಗಳನ್ನು ತೊರೆದು ವಿದ್ಯಾರ್ಥಿಗಳು ಅನುಶಾಸನದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದಲೇಸಮವಸ್ತ್ರ ಸಂಹಿತೆ ಇದೆ. ಹೀಗಾಗಿ, ಸಮವಸ್ತ್ರ ಕಟ್ಟಳೆ ವಿಧಿಸುವುದಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಶಿಕ್ಷಣ ಕಾಯ್ದೆ–1983 ಹಾಗೂ ಕರ್ನಾಟಕ ಶೈಕ್ಷಣಿಕ ಪಠ್ಯಕ್ರಮ ನಿಯಮಾವಳಿ–1995ರ ಅಡಿ ಅಧಿಕಾರವಿಲ್ಲ ಎಂಬ ಅರ್ಜಿದಾರರ ಮನವಿಯಲ್ಲಿ ಹುರುಳಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಸಂವಿಧಾನದ 25ನೇ ವಿಧಿಯು ಧಾರ್ಮಿಕ ಆಚರಣೆಯ ರಕ್ಷಣೆಗಳ ಬಗ್ಗೆ ವಿವರಿಸುತ್ತದೆ. ಆದರೆ, ಅತ್ಯಾವಶ್ಯಕ ಧಾರ್ಮಿಕ ಆಚರಣೆಯ ಬಗ್ಗೆ ಹೇಳಿಲ್ಲ. ಆದರೂ, ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸುವ ಅಧಿಕಾರ ಸಂವಿಧಾನದಲ್ಲಿ ಪ್ರದತ್ತವಾಗಿದೆ. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಶಿರೂರು ಮಠದ ಪ್ರಕರಣದಿಂದ ಹಿಡಿದು ಶಬರಿಮಲೆ ಪ್ರಕರಣದವರೆಗೂ ಈಗಾಗಲೇ ಸ್ಪಷ್ಟಪಡಿಸಿದೆ’ ಎಂದು ತೀರ್ಪಿನಲ್ಲಿವಿವರಿಸಲಾಗಿದೆ.

‘ಉಭಯ ಪಕ್ಷಗಾರರು ಅನ್ಯ ದೇಶದ ಕೋರ್ಟ್‌ಗಳ ಹಲವು ಪ್ರಕರಣಗಳನ್ನು ಪೂರಕವಾಗಿ ಉಲ್ಲೇಖಿಸಿದ್ದರಾದರೂ, ಅವುಗಳು ಈ ದೇಶದ ಸಂಸ್ಕೃತಿ ಮತ್ತು ನೆಲದ ಕಾನೂನಿಗೆ ಭಿನ್ನವಾದ ಕಾರಣ ಅವುಗಳ ತೀರ್ಪುಗಳನ್ನು ಅವಲಂಬಿಸಲು ಹೋಗಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತೀರ್ಪಿನ ಮುಖ್ಯಾಂಶಗಳು
l ಆರು ವಿದ್ಯಾರ್ಥಿನಿಯರ ವೈಯ ಕ್ತಿಕ ಅರ್ಜಿ, ಇತರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗಳ ವಜಾ
l ಸಮವಸ್ತ್ರ ಸಂಹಿತೆಗೆ ಸಂಬಂಧಿ ಸಿದಂತೆ ರಾಜ್ಯ ಸರ್ಕಾರ 05.02.2022ರಂದು ಹೊರಡಿ ಸಲಾದ ಸುತ್ತೋಲೆ ಎತ್ತಿಹಿಡಿದ ನ್ಯಾಯಪೀಠ
l ಕುರಾನ್‌ನಲ್ಲಿ ಮಹಿಳೆಯರು ಕುತ್ತಿಗೆಯಿಂದ ಕೆಳಭಾಗವನ್ನು ವಸ್ತ್ರದಿಂದ ಮುಚ್ಚಿಕೊಂಡಿರಬೇಕು ಎಂದಿದೆಯೇ ಹೊರತು ಹಿಜಾಬ್‌ ಪ್ರಸ್ತಾಪವಿಲ್ಲ
l ಸುಪ್ರೀಂ ಕೋರ್ಟ್‌ ತನ್ನ ತೀರ್ಪುಗಳಿಗೆ ಒಪ್ಪಿರುವ ಅಧಿ ಕೃತ ಕುರಾನ್‌ ವ್ಯಾಖ್ಯಾನದ ಪ್ರತಿಯನ್ನೇ ಈ ಪ್ರಕರಣದಲ್ಲೂ ಅವಲಂಬಿಸಿದ ನ್ಯಾಯಪೀಠ

‘ಹುಸಿಯಾದ ನಿರೀಕ್ಷೆ: ಕಾನೂನು ಹೋರಾಟ’
ಉಡುಪಿ:
ಹಿಜಾಬ್ ಪರವಾಗಿ ಹೈಕೋರ್ಟ್‌ ತೀರ್ಪು ಬರಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಹಿಜಾಬ್ ಪರವಾಗಿ ಕಾನೂನು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಮಂಗಳವಾರ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಆಲ್ಮಾಸ್‌, ‘ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಂಬಂಧ ವಕೀಲರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಕೆ
ನವದೆಹಲಿ
: ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮೇಲ್ಮನವಿ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ರಾಜ್ಯ ಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್‌ ಧರಿಸು ವುದನ್ನು ನಿಷೇಧಿಸಿ ಆದೇಶಿಸಿರುವುದು ಸರಿಯಲ್ಲ ಎಂದು ನಿಬಾ ನಾಜ್‌ ಎಂಬುವವರು ವಕೀಲ ಅನಾಸ್‌ ತನ್ವೀರ್‌ ಅವರ ಮೂಲಕ ಸಲ್ಲಿಸಿರುವ ಮೇಲ್ಮನವಿಯಲ್ಲಿ ದೂರಲಾಗಿದೆ.

ಹೈಕೋರ್ಟ್‌ ಆದೇಶ ಪಾಲಿಸಬೇಕು’
ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಹಿಜಾಬ್‌ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದೂ ಹೇಳಿದೆ. ತೀರ್ಪಿನಿಂದ ಪ್ರಕರಣ ಇತ್ಯರ್ಥವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾನೂನನ್ನು ಕೈಗೆತ್ತಿ ಕೊಂಡರೆ ಗೃಹ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದದ್ದು ಬೇರೊಂದಿಲ್ಲ. ಹೀಗಾಗಿ ಹೈಕೋರ್ಟ್‌ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಪಾಲಿಸ ಬೇಕು. ಅನುಷ್ಠಾನ ಗೊಳಿಸುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಎಲ್ಲ ಸಮುದಾಯದ ನಾಯಕರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಗಳಿಂದ ಹೊರಗುಳಿಯದೇ, ತರಗತಿಗಳಿಗೆ ಹಾಜರಾಗಬೇಕು. ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ನಾವು ನೀವೆಲ್ಲರೂ ಸೇರಿ ಚಿಂತಿಸಬೇಕು ಎಂದರು.

*
ಹೈಕೋರ್ಟ್‌ ನೀಡಿರುವ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು. ರಾಜಕೀಯ ಲಾಭ–ನಷ್ಟದ ಬಗ್ಗೆ ಯೋಚಿಸದೆ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣದ ಕುರಿತು ಚಿಂತಿಸಬೇಕು.
-ಎಚ್‌.ಡಿ. ದೇವೇಗೌಡ, ಜನತಾದಳ (ಎಸ್‌) ರಾಷ್ಟ್ರೀಯ ಅಧ್ಯಕ್ಷ

*

ಹೈಕೋರ್ಟ್‌ ಆದೇಶಕ್ಕೆ ತಲೆಬಾಗಬೇಕು. ಆದರೆ, ತೀರ್ಪಿನ ಬಗ್ಗೆ ಯಾವುದೇ ವ್ಯಾಖ್ಯಾನ ಮಾಡಲು ಹೋಗಲ್ಲ. ನಾನು ಪೂರ್ಣಪಾಠ ನೋಡಿಲ್ಲ. ಪೂರ್ತಿ ಓದಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತೇನೆ.
-ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ

*

ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಹೈಕೋರ್ಟ್‌ ನಿರಾ ಕರಿಸಿದೆ. ಇದನ್ನು ನಾವು ಒಪ್ಪಿ ಕೊಳ್ಳುವುದಿಲ್ಲ. ನಮ್ಮ ಹೋರಾಟಕ್ಕೆ ಕೈಜೋಡಿಸಲು ಮನವಿ.
-ಎಂ.ಎಸ್.ಸಾಜಿದ್, ಕ್ಯಾಂಪಸ್ ಫ್ರಂಟ್‌ ಆಫ್‌ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.