ADVERTISEMENT

ಕರ್ನಾಟಕದ ಕಡತ ಶಾಸ್ತ್ರಿ ನಿಧನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 17:23 IST
Last Updated 4 ಜನವರಿ 2020, 17:23 IST
ಡಾ.ಎ.ಕೆ.ಶಾಸ್ತ್ರಿ
ಡಾ.ಎ.ಕೆ.ಶಾಸ್ತ್ರಿ   

ಶಿರಸಿ: ಹಿರಿಯ ಇತಿಹಾಸ ತಜ್ಞ ಡಾ.ಎ.ಕೆ.ಶಾಸ್ತ್ರಿ (80) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ.

ಇತಿಹಾಸ ಅಧ್ಯಯನಕ್ಕೆ ಬಹುಮುಖ್ಯ ಆಕರವಾಗಿರುವ ಕಡತಗಳ ಮೇಲೆ ವಿಶೇಷ ಅಧ್ಯಯನ ನಡೆಸಿದ್ದ ಶಾಸ್ತ್ರಿಯವರು, ‘ಕರ್ನಾಟಕದ ಕಡತ ಶಾಸ್ತ್ರಿ’ ಎಂದೇ ಪ್ರಚಲಿತರಾಗಿದ್ದರು. ಶೃಂಗೇರಿ, ಚಿತ್ರಾಪುರ, ಗೋಕರ್ಣ, ಸ್ವರ್ಣವಲ್ಲಿ, ಬನವಾಸಿ, ಮಂಜುಗುಣಿ ಮೊದಲಾದ ಧಾರ್ಮಿಕ ಕ್ಷೇತ್ರಗಳ ಕಡತ, ತಾಡೋಲೆಗಳಲ್ಲಿರುವ ಮೋಡಿ ಲಿಪಿಯನ್ನು ಅಧ್ಯಯನ ಮಾಡಿ, ಸ್ಥಳ ಚರಿತ್ರೆಗಳ ಗ್ರಂಥ ಪ್ರಕಟಿಸಿದ್ದರು. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು, 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಶೃಂಗೇರಿಯ ಇತಿಹಾಸ’, 'ಕನ್ನಡದಲ್ಲಿ ಕಡತಗಳು', 'ಶೃಂಗೇರಿ ಮಠದ ಕಡತಗಳಲ್ಲಿ ಆಯ್ದ ಚಾರಿತ್ರಿಕ ದಾಖಲೆಗಳು’, 'A History of Sringeri', ‘The records of the Sringeri matha', ‘Relating to Keladi', ‘Keladi museum’ ಪ್ರಮುಖವಾದವು.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ನ ಸಂಶೋಧನಾ ಕಾರ್ಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. 2002ರಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 16ನೇ ಸಮ್ಮೇಳನ, 2006ರಲ್ಲಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌ನ 18ನೇ ಸಮ್ಮೇಳನ, 2009ರಲ್ಲಿ ರಾಷ್ಟ್ರ ಮಟ್ಟದ ಇತಿಹಾಸ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಯಾದ ನಂತರ, ‘ಅನಂತ ಚುಟುಕುಗಳು’ ಚುಟುಕುಗಳ ಸಂಕಲನ ಪ್ರಕಟಿಸಿದ್ದರು. 2015ರಲ್ಲಿ ಅವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಶತಮಾನೋತ್ಸವ ಗೌರವ ಪ್ರಶಸ್ತಿ ಲಭಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.