ADVERTISEMENT

ಕೃಷಿ ಭೂಮಿಗೂ ಪರಿಹಾರ ನೀಡಿ: ಎಚ್‌.ಕೆ.ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 18:52 IST
Last Updated 16 ಸೆಪ್ಟೆಂಬರ್ 2022, 18:52 IST

ಬೆಂಗಳೂರು: ಮಳೆ ಮತ್ತು ಪ್ರವಾಹ ದಿಂದ ಫಲವತ್ತತೆ ಕಳೆದುಕೊಂಡಿರುವ ಕೃಷಿ ಭೂಮಿಯ ಪುನರ್‌ ನಿರ್ಮಾ ಣಕ್ಕೆ ಎಕರೆಗೆ ತಲಾ ₹3 ಲಕ್ಷ ನೀಡು ವುದರ ಜತೆಗೆ ಬೆಳೆ ಸಾಲ ಮನ್ನಾ ಮಾಡುವಂತೆ ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ಮಳೆ ಮತ್ತು ಪ್ರವಾಹದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಭೂಮಿ ಸಮಪಾತಳಿ ಕಳೆದುಕೊಂಡಿದೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ’ ಎಂದು ಹೇಳಿದರು.

‘ಅಷ್ಟೇ ಅಲ್ಲ, ಬೆಳೆ ವಿಮೆ ಮಾಡಿಸಿದ ರೈತರಿಗೆ ಕ್ಲೈಮ್‌ ಹಣ ಪಾವತಿಸುವಲ್ಲಿಯೂ ಮೋಸ ಆಗಿದೆ. 2019–20 ರ ಸಾಲಿನಲ್ಲಿ ರಾಜ್ಯದಲ್ಲಿ ರೈತರು ₹2,276 ಕೋಟಿ ಪ್ರೀಮಿಯಂ ಪಾವತಿಸಿದ್ದಾರೆ. ₹1,357 ಕೋಟಿಗೆ ಕ್ಲೈಮ್‌ ಮಾಡಲಾಗಿದ್ದು, ₹1,215 ಕೋಟಿ ವಿಮೆ ಪಾವತಿಸಲಾಗಿದೆ. ಇದು ವಿಮಾ ಕಂಪನಿಗಳನ್ನು ಶ್ರೀಮಂತ
ಗೊಳಿಸುವ ಯೋಜನೆ’ ಎಂದು ಪಾಟೀಲ ಟೀಕಿಸಿದರು.

ADVERTISEMENT

‘ನಮ್ಮ ಕ್ಷೇತ್ರದ ಪ್ರಸಿದ್ಧ ಹರ್ತಿ ಬಸವೇಶ್ವರ ದೇವಸ್ಥಾನದ ಕಾಂಪೌಂಡ್‌ ಗೋಡೆ ಕುಸಿದು ಹೋಗಿದೆ. ಇದರಿಂದ ಜನ ಭಯಭೀತರಾಗಿದ್ದಾರೆ. ಇದರ ದುರಸ್ತಿ ಕಾರ್ಯಕ್ಕೆ ₹2 ಕೋಟಿ ಬಿಡುಗಡೆ ಮಾಡಬೇಕು’ ಎಂದೂ ಅವರು ಒತ್ತಾಯಿಸಿದರು.

ಸಿದ್ದರಾಮಯ್ಯ ಗರಂ: ಎಚ್‌.ಕೆ.ಪಾಟೀಲ ಮಾತು ಮುಗಿಸಿದ ಬಳಿಕ ಕಂದಾಯ ಸಚಿವ ಆರ್‌.ಅಶೋಕ ಹೊರಗೆ ಹೋದರು. ಅದೇ ಸಂದರ್ಭದಲ್ಲಿ ಒಳಗೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಅಶೋಕ ಇಲ್ಲದಿರುವುದನ್ನು ನೋಡಿ ಗರಂ ಆಗಿ ತರಾಟೆಗೆ ತೆಗೆದುಕೊಂಡರು.

‘ಕಂದಾಯ ಸಚಿವರು ಇಲ್ಲ. ಅಧಿಕಾರಿ ಗಳೂ ಇಲ್ಲ. ಸರ್ಕಾರಕ್ಕೆ ಗಂಭೀರತೆಯೇ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ಸಭಾಧ್ಯಕ್ಷ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು, ‘ಅಶೋಕ ಇಷ್ಟು ಹೊತ್ತು ಇದ್ದರು. ಕೇಳಿಕೊಂಡು ಹೊರಗೆ ಹೋಗಿದ್ದಾರೆ’ ಎಂದು ಹೇಳಿದರು. ಆದರೆ, ಸಿದ್ದರಾಮಯ್ಯ ಅವರು
ಸಮಾಧಾನಗೊಳ್ಳಲಿಲ್ಲ.

ಪ್ರಭಾವಿಗಳ ಮೇಲೂ ಕ್ರಮ ಜರುಗಿಸಿ: ರಾಮಸ್ವಾಮಿ

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಪ್ರಭಾವಿಗಳನ್ನು ಬಿಡಬಾರದು. ಯಾವುದೇ ಒತ್ತಡಕ್ಕೆ ಮಣಿಯದೇ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು.

ಇತ್ತೀಚಿನ ಮಳೆಯಲ್ಲಿ ಹಳೇ ಬೆಂಗಳೂರು ಭಾಗ ಜಲಾವೃತವಾಗಲಿಲ್ಲ. ಹೊಸ ಬಡಾವಣೆಗಳು ಮಾತ್ರ ಜಲಾವೃತವಾಗಿವೆ. ನೈಸರ್ಗಿಕ ಹರಿವಿಗೆ ಧಕ್ಕೆ ಆಗಿರುವುದೇ ಇದಕ್ಕೆ ಮುಖ್ಯ ಕಾರಣ. ಕೊಳಚೆ ನೀರು ರಾಜಕಾಲುವೆಗೆ ಸೇರುತ್ತಿದ್ದು ಈ ನೀರು ಕೆರೆಗೆ ಸೇರುತ್ತಿದೆ ಎಂದರು.

ಒತ್ತುವರಿ ತೆರವು ಕಾರ್ಯವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಬೇಡ. ಮುಲಾಜಿಲ್ಲದೇ ಒತ್ತುವರಿ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ, ‘ಬಡವರು ಶ್ರೀಮಂತರು ಎಂದು ನೋಡದೇ ಒತ್ತುವರಿ ತೆರವು ಮಾಡುತ್ತಿದ್ದೇವೆ. ತಾರತಮ್ಯ ಮಾಡುತ್ತಿಲ್ಲ ಆದರೆ, ಕಾಂಗ್ರೆಸ್‌ನವರು ಐಟಿ– ಬಿಟಿ ಕಂಪನಿಗಳ ತಂಟೆಗೆ ಹೋಗಬೇಡಿ ಎನ್ನುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.