ADVERTISEMENT

ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ: ಸಭಾಧ್ಯಕ್ಷರಿಗೆ ಪಾಟೀಲ ಪತ್ರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 19:14 IST
Last Updated 10 ಜೂನ್ 2020, 19:14 IST
ಎಚ್.ಕೆ. ಪಾಟೀಲ
ಎಚ್.ಕೆ. ಪಾಟೀಲ   

ಬೆಂಗಳೂರು: ವೈದ್ಯಕೀಯ ಸಲಕರಣೆಗಳ ಖರೀದಿ ಅವ್ಯವಹಾರ ಸಂಬಂಧ ಎಲ್ಲಾ ದಾಖಲೆಗಳೊಂದಿಗೆ ವಿಧಾನಸಭೆ ಸಭಾಧ್ಯಕ್ಷರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ) ಅಧ್ಯಕ್ಷ ಎಚ್‌.ಕೆ. ಪಾಟೀಲ ಅವರು, ತನಿಖೆಗೆ ನೀಡಿರುವ ತಡೆ ಆದೇಶ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ.

‘ಅತ್ಯಂತ ಗಂಭೀರ ಮತ್ತು ಕ್ರಿಮಿನಲ್ ಸ್ವರೂಪದ ಆರೋಪಗಳಿರುವ ಕಾರಣ ಸ್ಥಳ ಮತ್ತು ದಾಖಲೆಗಳ ಪರಿಶೀಲನೆ ಮಾಡಲು ಮೇ 26ರಂದು ನಡೆದ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ.ಆದರೆ, ಅದಕ್ಕೆ ಮೇ 27ರಂದು ತಾವು ತಡೆ ನೀಡಿರುವ ಕಾರಣ ಪರಿಶೀಲನೆ ಸಾಧ್ಯವಾಗಿಲ್ಲ.ಜೂ.2ರಂದು ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ತಮ್ಮನ್ನು ಭೇಟಿಯಾಗಲು ಸ್ಥಳ ಮತ್ತು ದಿನಾಂಕ ನಿಗದಿ ಮಾಡುವಂತೆ ಅಂದೇ ಪತ್ರ ಬರೆಯಲಾಗಿದೆ. ಆದರೂ, ಮಂಗಳವಾರದ ತನಕ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ’ ಎಂದು ಎಚ್‌.ಕೆ. ಪಾಟೀಲ ಅವರು ವಿವರಿಸಿದ್ದಾರೆ.

‘ಲಾಕ್‌ಡೌನ್ ಮತ್ತಷ್ಟು ಸಡಿಲಗೊಂಡಿರುವ ಕಾರಣ ಹೋಟೆಲ್, ಮಾಲ್‌ಗಳು, ಸಾರ್ವಜನಿಕ ಸಾರಿಗೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಈ ಸಂದರ್ಭದಲ್ಲಿ ಸ್ಥಳ ಪರಿಶೀಲನೆಗೆ ಇರುವ ತಡೆ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

2ರಂದು ಬರೆದ ಪತ್ರ 10ಕ್ಕೆ ತಲುಪಿತು!
‘ಸಭಾಧ್ಯಕ್ಷರಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಟೀಲರು ಮಾಡಿರುವ ಆರೋಪ ಸರಿಯಲ್ಲ. ಜೂ. 2ರಂದು ಅವರು ಬರೆದಿರುವ ಮೂಲ ಪತ್ರ ಇದೇ 10ರಂದು ಮಧ್ಯಾಹ್ನ 12.05ಕ್ಕೆ ಸಭಾಧ್ಯಕ್ಷರ ಕಚೇರಿಗೆ ತಲುಪಿದೆ’ ಎಂದು ಸಭಾಧ್ಯಕ್ಷರ ಸಚಿವಾಲಯ ಸ್ಪಷ್ಟನೆ ನೀಡಿದೆ.

‘ಸಭಾಧ್ಯಕ್ಷರ ಅಧಿಕೃತ ಇ–ಮೇಲ್‌ಗೆ ಜೂ.2ರಂದು ಸಂಜೆ 6.43ಕ್ಕೆ ಪತ್ರ ಕಳಹಿಸಲಾಗಿದೆ. ವಿಧಾನಸಭೆ ಕಾರ್ಯದರ್ಶಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅವರಇ–ಮೇಲ್‌ಗೂ ಕಳುಹಿಸಲಾಗಿದೆ. ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅವರ ವಾಟ್ಸ್‌ ಆ್ಯಪ್ ಸಂಖ್ಯೆಗೂ ಕಳುಹಿಸಿದ್ದೇವೆ. ಸ್ಪೀಕರ್ ಅವರ ಗಮನಕ್ಕೆ ತರಲಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ’ ಎಂದು ತಿಳಿಸಿರುವಪಿಎಸಿ ಕಚೇರಿಯ ಅಧಿಕಾರಿಗಳು, ಇ–ಮೇಲ್ ಕಳುಹಿಸಿರುವ ದಿನಾಂಕ ಮತ್ತು ಸಮಯದ ಸ್ಕ್ರೀನ್ ಶಾಟ್ ಅನ್ನು ‘ಪ್ರಜಾವಾಣಿ’ಗೆ ಕಳುಹಿಸಿದ್ದಾರೆ.

ಈ ಬಗ್ಗೆ ‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ ಅವರು, ‘ಇ–ಮೇಲ್ ಕಳುಹಿಸಿರುವ ದಾಖಲೆಗಳು ನಮ್ಮ ಬಳಿ ಇವೆ. ಆದರೂ, ಪತ್ರ ನಮಗೆ ತಲುಪಿಲ್ಲ ಎಂದು ಸಭಾಧ್ಯಕ್ಷರ ಸಚಿವಾಲಯವೇ ಹೇಳಿದರೆ ಏನರ್ಥ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.