ADVERTISEMENT

ಅಕ್ರಮ ಗಣಿಗಾರಿಕೆ ಕುರಿತು ಸಿಎಂ ಸಿದ್ದರಾಮಯ್ಯಗೆ ಎಚ್​.ಕೆ. ಪಾಟೀಲ ಸುದೀರ್ಘ ಪತ್ರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:38 IST
Last Updated 21 ಜೂನ್ 2025, 15:38 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ‘ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಆಗಿರುವ ₹1.50 ಲಕ್ಷ ಕೋಟಿ ನಷ್ಟ ವಸೂಲು ಮಾಡಲು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಬ್ಬ ವಸೂಲಾತಿ ಆಯುಕ್ತರನ್ನು ತಕ್ಷಣ ನೇಮಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಚಿವ ಎಚ್​.ಕೆ. ಪಾಟೀಲ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ 2007ರಿಂದ 2011ರವರೆಗೆ ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಶಾಹಿಗಳು ಅಕ್ರಮ ಕೂಟ ರಚಿಸಿಕೊಂಡು ಸಂಘಟಿತರಾಗಿ ನಡೆಸಿದ ಅಕ್ರಮ ಗಣಿಗಾರಿಕೆಯ ವಿವರಗಳನ್ನು ಏಳು ಪುಟಗಳ ಪತ್ರದಲ್ಲಿ ವಿವರಿಸಿರುವ ಪಾಟೀಲರು, ‘ಈ ಪ್ರಕರಣಗಳ ತನಿಖೆಗೆ ತಕ್ಷಣ ವಿಶೇಷ ನ್ಯಾಯಾಲಯ ಸ್ಥಾಪನೆ ಆಗಬೇಕು’ ಎಂದು ಸಲಹೆ ನೀಡಿದ್ದಾರೆ.

‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಪೂರ್ಣಗೊಂಡು ನ್ಯಾಯಾಲಯದ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗಿಂತ 10 ಪಟ್ಟು ಹೆಚ್ಚಿನ ಪ್ರಕರಣಗಳು ತನಿಖೆಗೆ ಒಳಪಡಲೇಬೇಕು. ಅಂತಹ ಪ್ರಕರಣಗಳ ತನಿಖೆ ವಿಶೇಷ ತನಿಖಾ ತಂಡ ರಚಿಸಬೇಕು. ತಾಂತ್ರಿಕ, ಕಾನೂನಿನ ದೌರ್ಬಲ್ಯ, ವ್ಯವಸ್ಥೆಯ ಅನುಕೂಲತೆ ಮತ್ತು ಅನುಮಾನದ ಪ್ರಯೋಜನಗಳಿಂದ ಆರೋಪಿ ಪಾರಾಗಿ ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದು. ಆದರೆ, ಅಕ್ರಮವಾಗಿ ಗಳಿಸಿದ ರಾಜ್ಯದ ಸಂಪತ್ತನ್ನು ಖಜಾನೆಗೆ ವಾಪಸ್‌ ತರದಿದ್ದರೆ ಅದು ವ್ಯವಸ್ಥೆಯ ವಿಡಂಬನೆ ಆದಂತಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ವಾಣಿಜ್ಯ ತೆರಿಗೆ ವಂಚನೆ, ಅಬಕಾರಿ ಸುಂಕದ ವಂಚನೆ, ಅರಣ್ಯ ಅಭಿವೃದ್ಧಿ ಸುಂಕ ವಂಚಿಸಿದ ಅನೇಕ ಪ್ರಕರಣಗಳ ತನಿಖೆ ಸುದೀರ್ಘ 16 ವರ್ಷ ನಂತರವೂ ಶೈಶವಾವಸ್ಥೆಯಲ್ಲಿವೆ. ತಮ್ಮ ನೇತೃತ್ವದಲ್ಲಿ 2013ರಿಂದ 2018ರ ಅವಧಿಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸಂಪುಟ ಉಪ ಸಮಿತಿ ಕೈಗೊಂಡ ಕ್ರಮಗಳಿಂದಾಗಿ 43ಕ್ಕೂ ಹೆಚ್ಚು ಪ್ರಕರಣಗಳ ಎಫ್‌ಐಆರ್ ಆಗಿ ತನಿಖೆ ನಡೆದು ಇನ್ನೂ ನ್ಯಾಯಾಲಯಗಳಲ್ಲಿ ವಿವಿಧ ಹಂತಗಳಲ್ಲಿ ವಿಚಾರಣೆ ನಡೆಯುತ್ತಿದೆ. 2013ರ ನ. 18ರಂದು ಒಂಬತ್ತು ಪ್ರಕರಣಗಳನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಆ ಪೈಕಿ, ಆರು ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ನಿರಾಕರಿಸಿತ್ತು. ಮೂರು ಪ್ರಕರಣಗಳಲ್ಲಿ ಮಾತ್ರ ಸಿಬಿಐ ತನಿಖೆ ನಡೆದು ನ್ಯಾಯಾಲಯಗಳಿಗೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಸಿಬಿಐ ತನಿಖೆಗೆ ನಿರಾಕರಿಸಿದ್ದ ಆರು ಪ್ರಕರಣಗಳನ್ನುಅಕ್ರಮ ಗಣಿಗಾರಿಕೆ ತನಿಖೆಗೆ ಲೋಕಾಯುಕ್ತದಡಿ ನೇಮಿಸಿದ್ದ ವಿಶೇಷ ತನಿಖಾ ದಳಕ್ಕೆ  ರಾಜ್ಯ ಸರ್ಕಾರವು ವಹಿಸಿದೆ’ ಎಂದು ಪತ್ರದಲ್ಲಿ ಪಾಟೀಲರು ವಿವರಿಸಿದ್ದಾರೆ.

‘ಅಕ್ರಮ ಗಣಿಗಾರಿಕೆ: ಶೇ 7ರಷ್ಟು ಪ್ರಕರಣ ಮಾತ್ರ ತನಿಖೆ’

ರಾಯಚೂರು: ‘ಅಕ್ರಮ ಗಣಿಗಾರಿಕೆ ಕುರಿತು 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದರೂ ಅದರಲ್ಲಿ ಶೇ 7ರಷ್ಟು ಮಾತ್ರ ತನಿಖೆಯಾಗುತ್ತಿವೆ. ಈ ಪೈಕಿ ಶೇಕಡ ಶೇ 0.2ರಷ್ಟು  ಪ್ರಕರಣಗಳ ತೀರ್ಪು ಬಂದಿವೆ. ಹೀಗಾಗಿ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಳು ಪುಟಗಳ ಪತ್ರ ಬರೆದಿದ್ದೇನೆ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಸಚಿವ ಎನ್.ಎಸ್. ಬೋಸರಾಜು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು  ‘ಸಿಬಿಐಗೆ 9 ಪ್ರಕರಣಗಳನ್ನು ವಹಿಸಲಾಗಿದೆ. ಅದರಲ್ಲಿ ಆರು ಪ್ರಕರಣಗಳ ತನಿಖೆ ಮಾಡುವುದಿಲ್ಲ ಎಂದು ಸಿಬಿಐ ಹೇಳಿದೆ. ಎಸ್‌ಐಟಿಯಲ್ಲಿ ಒಂದೂ ಪ್ರಕರಣ ತನಿಖೆಯಾಗಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅಕ್ರಮ ಕೂಟದಿಂದಾಗಿ ಸರ್ಕಾರಕ್ಕೆ ₹ 1.40 ಲಕ್ಷ ಕೋಟಿ ಹಾನಿಯಾಗಿರುವುದನ್ನು 2017–2018ರಲ್ಲಿ ರಚಿಸಿದ ನನ್ನ ಅಧ್ಯಕ್ಷತೆಯ ಸಮಿತಿಯು ಮಾಹಿತಿಯನ್ನು ಹೊರ ಹಾಕಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ’ ಹೇಳಿದರು.

‘ಸಾರ್ವಜನಿಕರ ಹಣ ಪೋಲಾಗುವುದು ನಿಲ್ಲಬೇಕು. ರಾಜ್ಯದ ಜನರ ಹಿತದೃಷ್ಟಿಯಿಂದ ಪ್ರಕರಣಗಳು ತಾರ್ಕಿಕವಾಗಿ ಅಂತ್ಯವಾಗಬೇಕು. ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬೇಕು ಎನ್ನುವ ಉದ್ದೇಶದಿಂದ ಪತ್ರ ಬರೆದಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.