ADVERTISEMENT

ಎಚ್‌ಎಂಪಿವಿ | ಭಯ ಬೇಕಿಲ್ಲ: ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 19:13 IST
Last Updated 6 ಜನವರಿ 2025, 19:13 IST
   

ಬೆಂಗಳೂರು: ರಾಜ್ಯದಲ್ಲಿ ಹ್ಯೂಮನ್ ಮೆಟಾನ್ಯುಮೋ ವೈರಾಣು (ಎಚ್‌ಎಂಪಿವಿ) ಸೋಂಕಿನ ಎರಡು ಪ್ರಕರಣಗಳು ಪತ್ತೆಯಾಗಿವೆ. ಈ ವೈರಾಣುವಿನಿಂದ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರತಿಪಾದಿಸಿದೆ.

‘ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಮೂರು ಮತ್ತು ಎಂಟು ತಿಂಗಳ ಎರಡು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿದೆ. ಒಂದು ಮಗು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದೆ. ಇನ್ನೊಂದು ಮಗು ಚೇತರಿಸಿ ಕೊಳ್ಳುತ್ತಿದ್ದು, ಶೀಘ್ರದಲ್ಲೇ ಮನೆಗೆ ತೆರಳಲಿದೆ. ಎರಡೂ ಮಕ್ಕಳು ಬ್ರ್ಯಾಂಕೊ ನ್ಯುಮೋನಿಯಾ ಸಮಸ್ಯೆಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು’ ಎಂದು ಇಲಾಖೆ ಮಾಹಿತಿ ನೀಡಿದೆ.

‘ಚೀನಾದಲ್ಲಿ ಪತ್ತೆಯಾಗಿರುವ ವೈರಸ್‌ ಬಗ್ಗೆ ಮಾಹಿತಿ ಇಲ್ಲ. ಆದರೆ, ರಾಜ್ಯದಲ್ಲಿ ಪತ್ತೆಯಾಗಿರುವ ಎಚ್‌ಎಂಪಿವಿ ಹೊಸದಲ್ಲ. ಬಹಳ ಹಿಂದಿನಿಂದಲೂ ನಮ್ಮ ದೇಶದಲ್ಲಿದೆ. ಸಾಮಾನ್ಯವಾಗಿ ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಇರುವ ಶೇಕಡ 1ರಷ್ಟು ಜನರಲ್ಲಿ ಈ‌ ವೈರಾಣು ಕಂಡು ಬರುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಎಚ್ಎಂಪಿವಿ ಪತ್ತೆಯಾದ ಕಾರಣದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು.

ADVERTISEMENT

ಎಚ್ಎಂಪಿವಿ ಪತ್ತೆಯಾದ ಕಾರಣದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಅಪಾಯಕಾರಿ ವೈರಸ್‌ ಅಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಮಕ್ಕಳು, ವೃದ್ಧರು ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು’ ಎಂದು ವಿವರಿಸಿದರು.

ಕಠಿಣ ಕ್ರಮವಿಲ್ಲ:

‘ಇಲ್ಲಿಯವರೆಗೂ ದೇಶದ ಎಲ್ಲೂ ಗಂಭೀರ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ, ಪರೀಕ್ಷೆ, ಮಾಸ್ಕ್ ಧರಿಸುವುದು ಸೇರಿದಂತೆ ಯಾವುದೇ ಕಠಿಣ ಕ್ರಮವನ್ನು ಜಾರಿಗೊಳಿಸುವುದಿಲ್ಲ. ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದಿಂದಲೂ ಸೂಚನೆಗಳು ಬಂದಿಲ್ಲ’ ಎಂದು ಸಚಿವ ದಿನೇಶ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸದ್ಯ, ರಾಜ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುತ್ತಿದ್ದೇವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸೂಚನೆಗಳನ್ನು ಅನುಸರಿಸುತ್ತೇವೆ. ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದರು.

ದಿನೇಶ್ ಗುಂಡೂರಾವ್
ರಾಜ್ಯದಲ್ಲಿ ಎಚ್‌ಎಂಪಿವಿ ವೈರಾಣು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ತೆಗೆದುಕೊಳ್ಳಲಿವೆ. ಈ ಬಗ್ಗೆ ಸೂಚನೆ ನೀಡಲಾಗಿದೆ
ಸಿದ್ದರಾಮಯ್ಯ ಮುಖ್ಯಮಂತ್ರಿ
ಸರ್ಕಾರ ಕೇವಲ ಕಾಟಾಚಾರಕ್ಕೆ ಸಭೆಗಳನ್ನು ಮಾಡಿ, ಮಾರ್ಗಸೂಚಿ ಬಿಡುಗಡೆ ಮಾಡಿದರೆ ಸಾಲದು. ಈ ಕೂಡಲೇ ಸಮರ್ಥ ಸಚಿವರನ್ನು ಒಳಗೊಂಡ ಕಾರ್ಯಪಡೆ ಹಾಗೂ ತಜ್ಞ ವೈದ್ಯರ ಸಮಿತಿ ರಚಿಸಲಿ ಆರ್.ಅಶೋಕ, ವಿರೋಧ ಪಕ್ಷದ ನಾಯಕ
ಎಚ್‌ಎಂಪಿವಿ ಎಂದರೇನು ?
ಹ್ಯೂಮನ್ ಮೆಟಾನ್ಯುಮೊ ವೈರಸ್‌– ಎಚ್‌ಎಂಪಿವಿಯ ವಿಸ್ತೃತ ರೂಪ. ಇದು ಉಸಿರಾಟದ ಸೋಂಕಿಗೆ ಕಾರಣವಾಗುವ ವೈರಾಣು. ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವವರಿಗೆ, ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚಾಗಿ ಈ ವೈರಾಣು ಹರಡುತ್ತದೆ. 2001ರಲ್ಲಿ ನೆದರ್ಲೆಂಡ್ಸ್‌ನಲ್ಲಿ ಪತ್ತೆಯಾಯಿತು.

ರೋಗ ಲಕ್ಷಣಗಳು: ‌

ಸಾಮಾನ್ಯವಾದ ಶೀತ, ಕೆಮ್ಮು, ಜ್ವರ, ಮೂಗು ಕಟ್ಟುವುದು, ಸೀನುವಿಕೆ, ತಲೆ ನೋವಿನಂತಹ ಲಕ್ಷಣ ಹೊಂದಿರುತ್ತದೆ. ಜತೆಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಕೆಮ್ಮಿದಾಗ, ಸೀನಿದಾಗ ಹೊಮ್ಮುವ ಹನಿಗಳಿಂದ ವೈರಾಣುಗಳು ಹರಡುತ್ತವೆ.

ಚಿಕಿತ್ಸಾ ಕ್ರಮಗಳು:

ಎಚ್‌ಎಂಪಿವಿ ಸೋಂಕಿಗೆ ನಿಗದಿತವಾದ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಜ್ವರ, ಮೈಕೈ ನೋವು ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬಂದಲ್ಲಿ, ಚಿಕಿತ್ಸೆ ಪಡೆಯಬೇಕು. ದೇಹ ನಿರ್ಜಲೀಕರಣ ಆಗದಂತೆ ಎಚ್ಚರವಹಿಸಬೇಕು. ಗಂಭೀರ ಪ್ರಕರಣಗಳಾದರೆ ಆಸ್ಪತ್ರೆಗೆ ದಾಖಲಾಗಿ, ಆಮ್ಲಜನಕ ಪೂರೈಕೆಯ ನೆರವು ಪಡೆಯಬೇಕಾಗಬಹುದು. (ಮಾಹಿತಿ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ)

ಆರೋಗ್ಯ ಇಲಾಖೆ ಮಾರ್ಗ ಸೂಚಿ

ಎಚ್‌ಎಂಪಿವಿ ಕಾಣಿಸಿಕೊಂಡಿರುವ ಕಾರಣದಿಂದ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಏನು ಮಾಡಬೇಕು?

l ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ

l ಆಗಾಗ ಸಾಬೂನು ಅಥವಾ ಸ್ಯಾನಿಟೈ ಸರ್‌ನಿಂದ ಕೈಗಳನ್ನು ‌ತೊಳೆದುಕೊಳ್ಳಿ

l ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ

l ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ

l ಅನಾರೋಗ್ಯದ ಲಕ್ಷಣಗಳಿದ್ದವರು ಸಭೆ–ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿ

l ಹೆಚ್ಚು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರ ಸೇವಿಸಿ

ಏನು ಮಾಡಬಾರದು?

l ಬಳಸಿದ ಟಿಶ್ಯೂ, ಕರವಸ್ತ್ರವನ್ನು ಪುನರ್‌ ಬಳಕೆ ಮಾಡಬಾರದು

l ಕೆಮ್ಮು, ಜ್ವರದಂತಹ ಲಕ್ಷಣಗಳಿರುವವ
ರೊಂದಿಗೆ ನಿಕಟ ಸಂಪರ್ಕ ಹಾಗೂ ಟವೆಲ್, ಬಟ್ಟೆ ಹಂಚಿಕೊಳ್ಳಬಾರದು

l ನಿಮ್ಮ ಕಣ್ಣುಗಳು, ಮೂಗು, ಬಾಯಿಯನ್ನು ಆಗಿಂದಾಗ್ಗೆ ಸ್ಪರ್ಶಿಸಬಾರದು

l ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು

l ವೈದ್ಯರನ್ನು ಸಂಪರ್ಕಿಸದೆ ಔಷಧ ಸೇವಿಸಬಾರದು

ಚೆನ್ನೈ, ಅಹಮದಾಬಾದ್‌ನಲ್ಲೂ ಪತ್ತೆ
ಚೆನ್ನೈ/ಅಹಮದಾಬಾದ್ (ಪಿಟಿಐ): ಚೆನ್ನೈನಲ್ಲಿ ಎರಡು ಮತ್ತು ಅಹಮದಾಬಾದ್‌ನಲ್ಲಿ ಒಂದು ಹ್ಯೂಮನ್ ಮೆಟಾನ್ಯುಮೋವೈರಸ್ (ಎಚ್‌ಎಂಪಿವಿ) ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎರಡು ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ಪತ್ತೆಯಾಗಿದೆ. ರಾಜಸ್ಥಾನದ ಡುಂಗರ್‌ಪುರದ ಮಗುವಿನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡದ್ದರಿಂದ ಇಲ್ಲಿನ ಚಾಂದ್‌ಖೇಡಾ ಪ್ರದೇಶದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ ಎಚ್‌ಎಂಪಿವಿ ಇರುವುದು ಪತ್ತೆಯಾಗಿದೆ. ಎಚ್‌ಎಂಪಿವಿ ಇರುವುದು ಡಿ.26ರಂದೇ ಪತ್ತೆಯಾಗಿದ್ದರೂ, ಆಸ್ಪತ್ರೆಯವರು ನಮಗೆ ತಡವಾಗಿ ಮಾಹಿತಿ ನೀಡಿದ್ದಾರೆ’ ಎಂದು ಅಹಮದಾಬಾದ್‌ ನಗರ ಪಾಲಿಕೆಯ ವೈದ್ಯಾಧಿಕಾರಿ ಭವಿನ್‌ ಸೋಳಂಕಿ ತಿಳಿಸಿದ್ದಾರೆ.

‘ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದ ಮಗುವಿನ ಆರೋಗ್ಯ ಈಗ ಸ್ಥಿರವಾಗಿದೆ’ ಎಂದಿದ್ದಾರೆ. ಚೆನ್ನೈನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಪತ್ತೆಯಾಗಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಎಚ್‌ಎಂಪಿವಿ ಪತ್ತೆ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಸಭೆ ನಡೆಸಿದರು. ಎಚ್‌ಎಂಪಿವಿ ಹರಡುವುದು ವ್ಯಾಪಕವಾಗುತ್ತಿದೆ ಎನ್ನುವ ವರದಿಗಳು ಬಂದ ಕಾರಣ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.