ADVERTISEMENT

ಕೊರೊನಾ: ವೃದ್ಧರಿಗೆ ಮನೆಯೇ ಸುರಕ್ಷಿತ

ಹೊರಗಡೆ ತೆರಳದಂತೆ ಆರೋಗ್ಯ ಇಲಾಖೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 20:00 IST
Last Updated 22 ಏಪ್ರಿಲ್ 2020, 20:00 IST
ವಿಜಯಪುರ ತಾಲ್ಲೂಕಿನ ಐನಾಪುರ ಮಹಾಲ್‌ತಾಂಡಾದ ಶಾಲೆ ಕಟ್ಟೆ ಮೇಲೆ ಹರಟೆಯಲ್ಲಿ ತೊಡಗಿರುವ ವೃದ್ಧರು -ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ತಾಲ್ಲೂಕಿನ ಐನಾಪುರ ಮಹಾಲ್‌ತಾಂಡಾದ ಶಾಲೆ ಕಟ್ಟೆ ಮೇಲೆ ಹರಟೆಯಲ್ಲಿ ತೊಡಗಿರುವ ವೃದ್ಧರು -ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ಬೆಂಗಳೂರು: ರಾಜ್ಯದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ 70ಕ್ಕೂ ಅಧಿಕ ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಚಿಕಿತ್ಸೆಗೆ ಸ್ಪಂದಿಸುವುದು ನಿಧಾನ. ಹಾಗಾಗಿ ಹಿರಿಯ ನಾಗರಿಕರು ಮನೆಯಲ್ಲಿಯೇ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ರೋಗಿಗಳೊಂದಿಗಿನ ನೇರ ಹಾಗೂ ಪರೋಕ್ಷ ಸಂಪರ್ಕದಿಂದ ಹಿರಿಯ ನಾಗರಿಕರಿಗೆ ಸೋಂಕು ತಗಲುತ್ತಿದೆ. 80 ವರ್ಷ ಮೇಲ್ಪಟ್ಟ ಮೂವರು, 70 ವರ್ಷ ಮೇಲ್ಪಟ್ಟ ನಾಲ್ವರು, 60 ವರ್ಷ ಮೇಲ್ಪಟ್ಟ ಏಳು ಮಂದಿ, 50 ವರ್ಷ ಮೇಲ್ಪಟ್ಟ ಇಬ್ಬರು ಹಾಗೂ 42 ವರ್ಷದ ಒಬ್ಬರು ಸೇರಿದಂತೆ ರಾಜ್ಯದಲ್ಲಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ.

ಹಿರಿಯ ನಾಗರಿಕರಲ್ಲಿ ಹೆಚ್ಚಾಗಿ ಉಸಿರಾಟದ ಸಮಸ್ಯೆ ಇರುವುದರಿಂದ ಅವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕಾಗಿದೆ. ಚಿಕಿತ್ಸೆ ನೀಡುವ ವೈದ್ಯರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸರ್ಕಾರ ಕ್ರಿಟಿಕಲ್ ಕೇರ್ ಬೆಂಬಲಿತ ತಂಡವನ್ನು ರಚಿಸಿದೆ. ಮುಂಜಾಗೃತಾ ಕ್ರಮವಾಗಿ ಕೆಲವೊಂದು ಸೂಚನೆಗಳನ್ನು ಆರೋಗ್ಯ ಇಲಾಖೆ ನೀಡಿದೆ.

ADVERTISEMENT

ಸೋಂಕು ಬರದಂತೆ ಮುನ್ನೆಚ್ಚರಿಕೆ ವಹಿಸಿ

– ಕೊರೊನಾ ಸೋಂಕು ಭೀತಿ ಕಡಿಮೆ ಆಗುವವರೆಗೂ ಮನೆಯಲ್ಲಿಯೇ ಇರಿ

– ಮನೆಗೆ ಅತಿಥಿಗಳನ್ನು ಆಮಂತ್ರಿಸಬೇಡಿ. ಸದ್ಯಕ್ಕೆ ಬರದಂತೆ ಸೂಚಿಸಿ

– ಭೇಟಿ ಅನಿವಾರ್ಯವಾದಲ್ಲಿ ಅಂತರ ಕಾಯ್ದುಕೊಳ್ಳಿ

– ಒಬ್ಬಂಟಿಯಾಗಿ ವಾಸಿಸುತ್ತಿದ್ದಲ್ಲಿ ಅಗತ್ಯ ಸಾಮಗ್ರಿಗಳಿಗೆ ಆರೋಗ್ಯವಂತ ನೆರೆಹೊರೆಯವರ ನೆರವು ಪಡೆಯಿರಿ

– ಸಭೆ ಸಮಾರಂಭಗಳನ್ನು ನಿರ್ಬಂಧಿಸಿ

– ನಿತ್ಯ ಶಾರೀರಿಕವಾಗಿ ಸಕ್ರೀಯವಾಗಿರಿ

– ಊಟಕ್ಕೂ ಮೊದಲು, ಶೌಚಾಲಯ ಬಳಕೆ ನಂತರ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳಿ

– ಮೊಬೈಲ್, ಕನ್ನಡಕವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ

– ಸೀನುವಾಗ, ಕೆಮ್ಮುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಬಳಸಿ

– ಬಳಕೆಯಾದ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ಗಳನ್ನು ಸೂಕ್ತವಾದ ಸ್ಥಳಗಳಲ್ಲಿ ವಿಲೇವಾರಿ ಮಾಡಿ

– ಮನೆಯಲ್ಲಿಯೇ ತಯಾರಿಸಲಾದ ಆರೋಗ್ಯಕರ ಆಹಾರ ಸೇವಿಸಿ

–ದಿನನಿತ್ಯದ ಮಾತ್ರೆಗಳನ್ನು ತಪ್ಪದೇ ಸೇವಿಸಿ

– ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ

ವೈದ್ಯರ ಸಲಹೆ ‍ಪಡೆದು ಔಷಧಿ ‍ಪಡೆಯಿರಿ

– ಕೆಮ್ಮು, ನೆಗಡಿ, ಜ್ವರ ಇರುವ ವ್ಯಕ್ತಿಗಳಿಂದ ದೂರವಿರಿ

– ಸ್ನೇಹಿತರು, ಸಂಬಂಧಿಗಳೊಂದಿಗೆ ಕೈಕುಲುಕುವುದು, ತಬ್ಬಿಕೊಳ್ಳುವುದು ಮಾಡಬೇಡಿ

– ಜನಸಂದಣಿ ಇರುವ ಮಾರುಕಟ್ಟೆ, ಧಾರ್ಮಿಕ ಸ್ಥಳಗಳಿಗೆ ಹೋಗಬೇಡಿ

– ಪದೇ ಪದೇ ಮೂಗು, ಕಣ್ಣು, ಬಾಯಿಯನ್ನು ಮುಟ್ಟಿಕೊಳ್ಳಬೇಡಿ

– ವೈದ್ಯರ ಸಲಹೆ ಇಲ್ಲದೆ ಹೊಸ ಔಷಧಿಗಳನ್ನು ಸೇವಿಸಬೇಡಿ

– ಆಸ್ಪತ್ರೆಗೆ ತೆರಳುವ ಮೊದಲು ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ

– ತುರ್ತಾಗಿ ಹೊರಗಡೆ ಹೋಗಬೇಕಾದರೆ ಮುಖಗವಸು ಧರಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.