ADVERTISEMENT

ಕಾಂಗ್ರೆಸ್‌ ಲಂಗೋಟಿಯೂ ಉಳಿಯುವುದಿಲ್ಲ: ಆರಗ ಜ್ಞಾನೇಂದ್ರ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 13:50 IST
Last Updated 8 ಜೂನ್ 2022, 13:50 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಚಿತ್ರದುರ್ಗ: ಇಡೀ ದೇಶದ ಜನರು ಕಾಂಗ್ರೆಸ್‌ ಚಡ್ಡಿ ಬಿಚ್ಚಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಲಂಗೋಟಿಯನ್ನು ಬಿಚ್ಚಿ ಮನೆಗೆ ಕಳುಹಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕುಟುಕಿದರು.

‘ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ ಹೊಣೆಗಾರಿಕೆ ಮರೆತು ವರ್ತಿಸುತ್ತಿದೆ. ಸರ್ಕಾರ ಟೀಕಿಸಲು ಯಾವುದೇ ಅಸ್ತ್ರ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಆರ್‌ಎಸ್‌ಎಸ್‌ ಚಡ್ಡಿಯ ಬಗ್ಗೆ ಬೇಜವಾಬ್ದಾರಿಯಿಂದ ಟೀಕಿಸುತ್ತಿದೆ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ಶಕ್ತಿಯನ್ನು ಕಾಂಗ್ರೆಸ್‌ ಕಳೆದುಕೊಂಡಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ದೇವಲೋಕವನ್ನು ಧರೆಗೆ ಇಳಿಸಲಿಲ್ಲ. ಸಾಲ ಮಾಡುವುದು ಮತ್ತು ಮರುಪಾವತಿಸುವುದು ಸರ್ಕಾರದ ಕಾರ್ಯವೈಖರಿ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಗೆ ಸಾಲ ಮಾಡಿದರೆ ಹೊರತು ಮನೆಗೆ ಕೊಂಡೊಯ್ಯಲಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ರಾಜ್ಯ ಸರ್ಕಾರ ಸಾಲ ಮಾಡಲಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಬೆಂಗಳೂರಿನ ಈದ್ಗಾ ಮೈದಾನ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಲಾಗಿದೆ. ವರ್ಷದಲ್ಲಿ ಎರಡು ದಿನ ಮಾತ್ರ ನಮಾಜ್‌ಗೆ ಅವಕಾಶ ಕಲ್ಪಿಸಿ ನ್ಯಾಯಾಲಯ ಆದೇಶಿಸಿದೆ. ಇಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ಸಂಘಟನೆಗಳು ನೀಡಿದ ಮನವಿ ಪರಿಶೀಲಿಸಲಾಗುತ್ತದೆ. ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.