ADVERTISEMENT

ಹಣ ಪಡೆವ ಸಂದರ್ಭ ಬಂದರೆ ಆತ್ಮಹತ್ಯೆ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 23:42 IST
Last Updated 15 ಜನವರಿ 2023, 23:42 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ‘ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಅಂಥವನಿಂದ ಹಣ ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭಾನುವಾರ ಹೇಳಿದರು.

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಆತ ಯಾರೆಂದು ನನಗೆ ಗೊತ್ತಿಲ್ಲ. ಆತನ ಜತೆಗೆ ನನಗೆ ಸಂಪರ್ಕ ಇದ್ದರೆ ಬಂಧಿಸದಂತೆ ತಡೆಯುವುದು ನನಗೆ ದೊಡ್ಡ ವಿಚಾರವಾಗಿರಲಿಲ್ಲ’ ಎಂದು ಹೇಳಿದರು.

‘ನನ್ನ ಗುಜರಾತ್ ಭೇಟಿ ಕಾರ್ಯಕ್ರಮ 6 ತಿಂಗಳು ಮೊದಲೇ ನಿಗದಿಯಾಗಿತ್ತು. ಅಪರಾಧ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದೆ. ನಾನು ಎಲ್ಲಿಗೆ ಹೋಗಿದ್ದೆ ಎಂಬ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನನ್ನ ಹೆಸರು ಹೇಳಿ ಗೊಂದಲ ಹುಟ್ಟಿಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ’ ಎಂದರು.

ADVERTISEMENT

‘ಸ್ಯಾಂಟ್ರೊ ರವಿ ಪೊಲೀಸ್‌ ಕಸ್ಟಡಿಗೆ ಯತ್ನ’
ಮೈಸೂರು: ನ್ಯಾಯಾಂಗ ಬಂಧನದಲ್ಲಿರುವ ಕೆ.ಎಸ್.ಮಂಜುನಾಥ ಅಲಿಯಾಸ್‌ ಸ್ಯಾಂಟ್ರೊ ರವಿಯನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲು ಸೋಮವಾರ (ಜ.16) ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಇಲ್ಲಿನ ವಿಜಯನಗರ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿದ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಅತ್ಯಾಚಾರ, ಸಾಂಕ್ರಾಮಿಕ ರೋಗ ಹರಡಿದ ಪ್ರಕರಣದ ತನಿಖೆಗೆ ಸ್ಥಳ ಪರಿಶೀಲನೆ, ಮಹಜರು, ಮಾಹಿತಿ ಸಂಗ್ರಹ, ವಿಚಾರಣೆಗಾಗಿ ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕಾಗಿದೆ ಎನ್ನುತ್ತಾರೆ ಪೊಲೀಸರು.

‘ಆರೋಪಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು‍ಪಡಿಸಿ, ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಯಾಂಟ್ರೊ ರವಿ ಹಾಗೂ ಆತನ ಸಹಚರರಾದ ಪ್ರೇಮ್‌ಜಿ, ಸುಶ್ರುತ್‌ (ಸತೀಶ್‌) ಎನ್ನುವವರನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಂಧಿಸಿದ್ದ ಪೊಲೀಸರು, ಶನಿವಾರ ಮೈಸೂರು ನಗರಕ್ಕೆ ಕರೆತಂದಿದ್ದರು. ರಜಾ ದಿನದಂದು ನ್ಯಾಯಾಧೀಶರ ನಿವಾಸದಲ್ಲೇ ಆತನನ್ನು ಹಾಜರುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.