ADVERTISEMENT

ಗೃಹ ಸಚಿವ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ

ರಿವಾಲ್ವರ್ ಇದೆ ಎಂದು ದಿನಕ್ಕೊಬ್ಬರನ್ನು ಕೊಲ್ಲುತ್ತೀರಾ?

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:56 IST
Last Updated 21 ಡಿಸೆಂಬರ್ 2019, 19:56 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಎಲ್ಲವನ್ನೂ ಪೊಲೀಸರೇ ತೀರ್ಮಾನ ಮಾಡುವುದಾದರೆ ಸಚಿವರ ಕೆಲಸ ಏನು? ಎಲ್ಲವನ್ನೂ ಅವರಿಗೇ ನಿರ್ಧರಿಸಲು ಬಿಟ್ಟು ರಾಜೀನಾಮೆ ನೀಡಿ ಮನೆಗೆ ಹೋಗಿ’ ಎಂದು ವಿಧಾನಸಭೆ ವಿರೋಧ ಪಕ್ಷದ
ನಾಯಕ ಸಿದ್ದರಾಮಯ್ಯ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕುಟುಕಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ ಅವರು, ‘ಸಮಯ ಸಂದರ್ಭ ನೋಡಿ ಪೊಲೀಸರೇ ಲಾಠಿ ಚಾರ್ಜ್, ಗೋಲಿಬಾರ್ ಮಾಡಬಹುದು’ ಎಂದು ಬೊಮ್ಮಾಯಿ ಹೇಳಿದ್ದಾರೆ. ಎಲ್ಲವನ್ನೂ ಪೊಲೀಸರೇ ತೀರ್ಮಾನಿಸುವುದಾದರೆಇನ್ನೂ ಯಾಕೆ ಅವರು ಆ ಹುದ್ದೆಯಲ್ಲಿ ಮುಂದುವರಿದಿದ್ದಾರೆ’ ಎಂದು ಪ್ರಶ್ನಿಸಿದರು.

‘ಗೋಲಿಬಾರ್ ಪ್ರಕರಣದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಅಪರಾಧಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು. ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

ನಿಷೇಧಕ್ಕೆ ಕಿಡಿ:‘ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಹೋಗದಂತೆ ನಿರ್ಬಂಧ ಹೇರಿಲ್ಲ’ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಅವರು, ‘ವಾಹನ, ರೈಲು, ವಿಮಾನ ಯಾವುದರ ಮೂಲಕವೂ ನಾನು ಮಂಗಳೂರು ಪ್ರವೇಶ ಮಾಡಬಾರದೆಂದು ಪೊಲೀಸರು ಆದೇಶ ಹೊರಡಿಸಿದ್ದಾರೆ’ ಎಂದರಲ್ಲದೇ ನೋಟಿಸ್‌ ಪ್ರತಿಯನ್ನು ಪ್ರದರ್ಶಿಸಿದರು.

‘ಶೋಭಾ ಜೊತೆ ಹೋಗಿದ್ದು ಏಕೆ?’

‘ನಮ್ಮನ್ನು ಮಂಗಳೂರಿಗೆ ಹೋಗದಂತೆ ತಡೆದ ಯಡಿಯೂರಪ್ಪನವರು, ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಲೇ ಬಂದಿರುವ ಶೋಭಾ ಕರಂದ್ಲಾಜೆ ಅವರನ್ನು ತಮ್ಮ ಜತೆ ಕರೆದುಕೊಂಡು ಹೋಗಿದ್ದೇಕೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ಸುಳ್ಳು ಹೇಳಿಕೆಗಳಿಂದ ಕೋಮುದ್ವೇಷ ಪ್ರಚೋದಿಸಿದ ಪ್ರಕರಣಗಳ ಇತಿಹಾಸವೇ ಶೋಭಾ ಅವರಿಗಿದೆ. ಅವರನ್ನು ಕರೆದುಕೊಂಡು ಹೋಗಿರುವುದು ಶಾಂತಿ ಕದಡುವುದಕ್ಕಾಗಿಯೇ ಅಥವಾ ಶಾಂತಿ ಸ್ಥಾಪನೆಗಾಗಿಯೇ?. ಶೋಭಾ ಅವರನ್ನು ನಿರ್ಬಂಧಿಸಿದರೆ ಕರಾವಳಿಯಲ್ಲಿ ಶಾಂತಿ ನೆಲೆಸಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ಸಿದ್ದರಾಮಯ್ಯ ಮಂಗಳೂರಿಗೆ ಪ್ರವೇಶಿಸದಂತೆ ಯಾವುದೇ ರೀತಿ ನಿರ್ಬಂಧ ಹೇರಿಲ್ಲ. ಅವರು ಸರ್ಕಾರ ನಡೆಸುತ್ತಿದ್ದಾಗ ಏನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.