ADVERTISEMENT

ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ರಾಜಕೀಯ ದುರುದ್ದೇಶವಿಲ್ಲ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 4:47 IST
Last Updated 15 ಮಾರ್ಚ್ 2024, 4:47 IST
ಡಾ. ಜಿ ಪರಮೇಶ್ವರ
ಡಾ. ಜಿ ಪರಮೇಶ್ವರ   

ಬೆಂಗಳೂರು: ಬಿಜೆಪಿ ನಾಯಮ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ರಾಜಕೀಯ ದುರುದ್ದೇಶವಿಲ್ಲ. ಮಹಿಳೆಯೊಬ್ಬರು ನೀಡಿರುವ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, 'ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಅವರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಅದನ್ನು ಪೊಲೀಸರು ಪರಿಶೀಲಿಸಿ ಎಫ್ಐಆರ್ ದಾಖಲಿಸಿದ್ದಾರೆ‌. ತನಿಖೆ ನಡೆಯುತ್ತಿದೆ. ಈಗಲೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಆಗುವುದಿಲ್ಲ' ಎಂದರು.

ಅಗತ್ಯ ಕಂಡುಬಂದರೆ ದೂರುದಾರ ಮಹಿಳೆಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ. ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯಬೇಕೆ? ಬೇಡವೆ? ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ಈ ಕುರಿತು ತಾವು ಏನನ್ನೂ ಹೇಳಲಾಗದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

'ಈ ಪ್ರಕರಣದಲ್ಲಿ ಮುಖ್ಯಮಂತ್ರಿಯವರಿಗಾಗಲಿ, ಉಪ ಮುಖ್ಯಮಂತ್ರಿಯವರಿಗಾಗಲಿ, ನನಗಾಗಲೀ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಪೊಲೀಸರು ಕಾನೂನಿನ ಪ್ರಕಾರ ತನಿಖೆ ನಡೆಸಿ, ಕ್ರಮ ಜರುಗಿಸುತ್ತಾರೆ' ಎಂದರು.

'ದೂರು ಕೊಟ್ಟ ಮಹಿಳೆ ಮಾನಸಿಕ‌ ಅಸ್ವಸ್ಥೆ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಕೈಬರಹದ ದೂರು ಕೊಟ್ಟಿಲ್ಲ, ಟೈಪ್ ಮಾಡಿದ ದೂರಿನ ಪ್ರತಿಯನ್ನು ಸಲ್ಲಿಸಿದ್ದರು ಎಂಬ ಮಾಹಿತಿ‌ ನೀಡಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.