ಸಚಿವ ಚಲುವರಾಯಸ್ವಾಮಿ
ಮಂಡ್ಯ: ‘ಮಧುಬಲೆ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲೇ ಚರ್ಚೆ ಆಗಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ, ರಾಜಣ್ಣ ಅವರ ಬಳಿಯೂ ಮಾತನಾಡಿರುವುದರಿಂದ ಇನ್ನೆರಡು ದಿನದಲ್ಲಿ ತನಿಖೆ ಆರಂಭವಾಗಲಿದೆ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧುಬಲೆ ಬಗ್ಗೆ ವರದಿ ಬಂದಾಗ ನೋಡೋಣ. ಇಂತಹ ಬೆಳವಣಿಗೆ ಸರಿಯಲ್ಲ, ಇದರಲ್ಲಿ ಡಿ.ಕೆ.ಶಿವಕುಮಾರ್ ಅಥವಾ ಅವರ ಸಹೋದರನ ಪಾತ್ರ ಇಲ್ಲ. ಅವರು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ರೀತಿ ಮಾತನಾಡುತ್ತಿಲ್ಲ. ರಾಜಣ್ಣ ಅಥವಾ ಅವರ ಮಗ ಇವರೇ ಮಾಡಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಈ ಹಿಂದೆ ಬಿಜೆಪಿಯವರೇ ಇಂಥದರಲ್ಲಿ ಸಿಲುಕಿದ್ದರೆಂಬುದನ್ನು ನೋಡಿದ್ದೇವೆ. ಯಾರೇ ಮಾಡಿದರೂ ಇದು ಒಳ್ಳೆಯದಲ್ಲ. ಮೊದಲು ವರದಿ ಬರಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಥವಾ ಸರ್ಕಾರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚನ್ನಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿದ್ದೇವೆ. ₹ 8 ಸಾವಿರ ಕೋಟಿಯನ್ನು ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮೀಸಲಿಟ್ಟಿದ್ದಾರೆ. ಹೀಗಿರುವಾಗ ಅವರಿಗೆ ಮಾತನಾಡಲೂ ಏನೂ ಇಲ್ಲ. ಹಾಗಾಗಿ ಇಲ್ಲದ ವಿಚಾರಗಳನ್ನು ತೆಗೆದು ಕ್ಯಾತೆ ತೆಗೆಯುತ್ತಾರೆ, ವಿರೋಧ ಪಕ್ಷದವರಾಗಿ ಜನಪರ ವಿಚಾರಗಳನ್ನು ಸದನದಲ್ಲಿ ಚರ್ಚೆ ಮಾಡಲು ಸಂಪೂರ್ಣ ವಿಫಲರಾಗಿದ್ದಾರೆ’ ಗುಡುಗಿದರು.
‘ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಜನತೆ ಛತ್ರಿಗಳು ಎಂದು ಹೇಳಿರುವುದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಅವರು ಪ್ರೀತಿಯಿಂದ ಹೇಳಿದ್ದಾರೋ, ಬಾಯಿ ಮಾತಿನಲ್ಲೇ ಹೇಳಿದರೋ ಗೊತ್ತಿಲ್ಲ. ಅವರೊಂದಿಗೆ ಚರ್ಚೆ ನಡೆಸಿ ಇಂತಹ ಮಾತುಗಳು ಇನ್ನು ಮುಂದೆ ಬೇಡ ಎಂದು ಮನವಿ ಮಾಡುತ್ತೇನೆ’ ಎಂದರು.
ಮಂಡ್ಯದಲ್ಲಿ ಐತಿಹಾಸಿಕವಾಗಿ ಸ್ಥಾಪನೆಯಾಗುತ್ತಿರುವ ಕೃಷಿ ವಿಶ್ವವಿದ್ಯಾಲಯಕ್ಕೆ ಕೇಂದ್ರದ ಸಚಿವರ ಪಕ್ಷದವರೇ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಿಲ್ಲೆಯ ಜನರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ನಾನು ಯಾವತ್ತೂ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಅವರನ್ನು ಸ್ನೇಹಿತರು ಎಂದೇ ಸಂಬೋಧಿಸುತ್ತೇನೆ. ಅವರು ಮಾತ್ರ ನನ್ನನ್ನು ಶತ್ರುವಾಗಿಯೇ ನೋಡುತ್ತಾರೆ. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ಬಗ್ಗೆ ರಾಜಕೀಯವಾಗಿ ಎಂದೂ ಮಾತನಾಡಿಲ್ಲ. ಅವರ ಬಗ್ಗೆ ನಮಗೆ ಗೌರವವಿದೆ. ಅಂತಹ ಸಂಸ್ಕೃತಿ ನಮ್ಮದಲ್ಲ’ ಎಂದು ತಿವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.