ADVERTISEMENT

‘ಮಧುಬಲೆ’ | ಸಾಕ್ಷ್ಯಾಧಾರಗಳ ಕೊರತೆ: ವಿಚಾರಣೆ ಮುಕ್ತಾಯದ ವರದಿ ಸಲ್ಲಿಸಿದ ಸಿಐಡಿ

​ಪ್ರಜಾವಾಣಿ ವಾರ್ತೆ
Published 29 ಮೇ 2025, 23:24 IST
Last Updated 29 ಮೇ 2025, 23:24 IST
<div class="paragraphs"><p>ಕೆ.ಎನ್‌.ರಾಜಣ್ಣ</p></div>

ಕೆ.ಎನ್‌.ರಾಜಣ್ಣ

   

ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಮಧುಬಲೆಗೆ (ಹನಿಟ್ರ್ಯಾಪ್) ಸಿಲುಕಿಸಲು ಯತ್ನಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾ ನಿದೇರ್ಶಕರಿಗೆ (ಡಿಜಿ-ಐಜಿಪಿ) ಅಂತಿಮ ವರದಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಸಚಿವ ಕೆ.ಎನ್. ರಾಜಣ್ಣ ಅವರು ದೂರು ನೀಡಿದ್ದರು. ಆ ದೂರನ್ನು ಹಿಂದಿನ ಡಿಜಿ-ಐಜಿಪಿ ಅವರಿಗೆ ವರ್ಗಾವಣೆ ಮಾಡಿದ್ದರು. ವಿಚಾರಣೆ ನಡೆಸಿ ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ರಾಜಣ್ಣ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವಾದ್ದರಿಂದ ಡಿಜಿ-ಐಜಿಪಿಗೆ ವಿಚಾರಣೆ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಡಿಜಿ-ಐಜಿಪಿ ಆ ವರದಿಯನ್ನು ಪರಿಶೀಲನೆ ಬಳಿಕ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಮಧುಬಲೆಗೆ ಕೆಡವಲು ಬಂದಿದ್ದರು ಎನ್ನಲಾದ ಅಪರಿಚಿತ ಯುವತಿ ಹಾಗೂ ಯುವಕನ ಬಗ್ಗೆ ರಾಜಣ್ಣ ಅವರು ಯಾವುದೇ ಮಾಹಿತಿ ನೀಡಿಲ್ಲ. ದೂರಿನಲ್ಲಿದ್ದ ಅಸ್ಪಷ್ಟ ಮಾಹಿತಿ ಹೊರತುಪಡಿಸಿದರೆ ಯಾವುದೇ ಸಾಕ್ಷ್ಯ ನೀಡಿಲ್ಲ. ಅವರು ಆರೋಪಿಸಿದಂತೆ ವಿಚಾರಣೆ ವೇಳೆ ಗಡ್ಡಧಾರಿ ವ್ಯಕ್ತಿಯೂ ಸಿಕ್ಕಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರ ಭದ್ರತಾ ಸಿಬ್ಬಂದಿ ಹಾಗೂ ಆಪ್ತ ಸಹಾಯಕರನ್ನು ವಿಚಾರಣೆ ನಡೆಸಲಾಗಿತ್ತು.‌ ಅವರು ಘಟನೆಯ‌ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂಬುದನ್ನು ವರದಿಯಲ್ಲಿ ಸಿಐಡಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.